ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದ ಪ್ರತಿಧ್ವನಿ

ಕೇಂದ್ರ ಗೃಹ ಸಚಿವಾಲಯ ಮಧ್ಯೆ ಪ್ರವೇಶಿಸಲಿ: ಸುಪ್ರಿಯಾ ಸುಲೆ

Update: 2022-12-07 16:42 GMT

ಹೊಸದಿಲ್ಲಿ, ಡಿ. 7: ಸಂಸತ್ತಿನ ಚಳಿಗಾಲದ ಅಧಿವೇಶನ ಬುಧವಾರ ಆರಂಭವಾಗುತ್ತಿದ್ದಂತೆ ಲೋಕಸಭೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರತಿಧ್ವನಿಸಿದೆ. ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ(Supriya Sule) ಅವರು, ಮಹಾರಾಷ್ಟ್ರ ನಂಬರ್ ಪ್ಲೇಟ್ ಇದ್ದ ವಾಹನಗಳ ಮೇಲೆ ಡಿಸೆಂಬರ್ 6ರಂದು ದಾಳಿ ನಡೆದಿರುವ ವಿಷಯ ಎತ್ತಿದರು. ಇದರಿಂದ ಆಡಳಿತಾರೂಢ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ‘‘ಕಳೆದ 10 ದಿನಗಳಿಂದ ಮಹಾರಾಷ್ಟ್ರದಲ್ಲಿ ಹೊಸ ಸಮಸ್ಯೆ ತಲೆದೋರಿದೆ. 

ನಮ್ಮ ನೆರೆಯ ರಾಜ್ಯ ಕರ್ನಾಟಕದ ಮುಖ್ಯಮಂತ್ರಿ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಮಹಾರಾಷ್ಟ್ರದ ಜನರು ನಿನ್ನೆ ಕರ್ನಾಟಕದ ಗಡಿಗೆ ತೆರಳಲು ಬಯಸಿದ್ದರು. ಆದರೆ, ಅವರನ್ನು ಥಳಿಸಲಾಯಿತು’’ ಎಂದು ಸುಲೆ ಹೇಳಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಮಹಾರಾಷ್ಟ್ರವನ್ನು ಒಡೆಯಲು ಸಂಚು ರೂಪಿಸುತ್ತಿದ್ದಾರೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದೆ. 

ಮಹಾರಾಷ್ಟ್ರದ ಜನರಿಗೆ ನಿನ್ನೆ ಥಳಿಸಲಾಗಿದೆ. ಇದಕ್ಕೆ ಅವಕಾಶ ನೀಡಬಾರದು. ಆದುದರಿಂದ ಕೇಂದ್ರ ಗೃಹ ಸಚಿವರು ಈ ವಿಷಯದ ಮಧ್ಯಪ್ರವೇಶಿಸಬೇಕು ಎಂದು ಸುಲೆ ಹೇಳಿದರು. ಸುಪ್ರಿಯಾ ಸುಲೆ ಹೇಳಿಕೆಗೆ ತಿರುಗೇಟ ನೀಡಿದ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ(Shivakumar Udasi), ಪ್ರತಿಪಕ್ಷದ ಮಹಾರಾಷ್ಟ್ರ ರಾಜಕಾರಣಿಗಳು ಹವ್ಯಾಸಿ ಅಪರಾಧಿಗಳು! ಇದು ಅವರ ಅಭದ್ರತೆ ಎಂದರು. ಸ್ವೀಕರ್‌ಗೆ ಮನವಿ ಮಾಡಿದ ಉದಾಸಿ, ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌(Supreme Court)ನಲ್ಲಿ ಇರುವುದರಿಂದ ಪ್ರತಿಪಕ್ಷಗಳಿಗೆ ಈ ಬಗ್ಗೆ ಮಾತನಾಡಲು ಅವಕಾಶ ನೀಡಬೇಡಿ ಎಂದರು.

 ಚರ್ಚೆಯಲ್ಲಿ ಪಾಲ್ಗೊಂಡ ಶಿವಸೇನೆ (ಉದ್ದವ್ ಬಾಳಾಸಾಹೇಬ್ ಠಾಕ್ರೆ)ಯ ಸಂಸದ ವಿನಾಯಕ್ ರಾವತ್(Vinayak Rawat), ಮರಾಠಿ ಮಾತನಾಡುವ ಜನರ ಮೇಲೆ ಕರ್ನಾಟಕ ಸರಕಾರ ದೌರ್ಜನ್ಯ ನಡೆಸುತ್ತಿರುವುದು ಅನ್ಯಾಯ ಎಂದರು.

Similar News