ಬಾಬರಿ ಮಸೀದಿ ಧ್ವಂಸ ಪ್ರಕರಣ 32 ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಲಿರುವ ಎಐಎಂಪಿಎಲ್‌ಬಿ

Update: 2022-12-07 16:53 GMT

ಅಯೋಧ್ಯೆ, ಡಿ. 7: 1992ರ ಬಾಬರಿ ಮಸೀದಿ(Babri Masjid) ಧ್ವಂಸ ಪ್ರಕರಣದ ಎಲ್ಲ 32 ಆರೋಪಿಗಳನ್ನು ಖುಲಾಸಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (AIMPLB) ಸುಪ್ರೀಂ ಕೋರ್ಟ್‌(Supreme Court)ಗೆ ಅರ್ಜಿ ಸಲ್ಲಿಸಲಿದೆ.

 ಈ ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ (LK Advani)ಸೇರಿದಂತೆ 32 ಆರೋಪಿಗಳನ್ನು ಸಿಬಿಐ ನ್ಯಾಯಾಲಯ 2020 ಸೆಪ್ಟಂಬರ್ 30ರಂದು ಖುಲಾಸೆಗೊಳಿಸಿತ್ತು. ಅನಂತರ ಅಯೋಧ್ಯೆ ಇಬ್ಬರು ನಿವಾಸಿಗಳಾದ ಹಾಜಿ ಮೆಹಬೂಬ್(Haji Mehboob) ಹಾಗೂ ಸಯ್ಯದ್ ಅಖ್ಲಾಬ್(Syed Akhlab) ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯದ ಇಬ್ಬರು ಸದಸ್ಯರ ಪೀಠ ಈ ಮರು ಪರಿಶೀಲನಾ ಅರ್ಜಿಯನ್ನು ಈ ವರ್ಷ ನವೆಂಬರ್ 9ರಂದು ತಿರಸ್ಕರಿಸಿತ್ತು. ಪ್ರಕರಣದಲ್ಲಿ ಮೇಲ್ಮನವಿದಾರರು ಸಂತ್ರಸ್ತರಲ್ಲದ ಕಾರಣ ತೀರ್ಪನ್ನು ಪ್ರಶ್ನಿಸಲು ಯಾವುದೇ ಅವಕಾಶ ಇಲ್ಲ ಎಂದು ಅದು ಹೇಳಿತ್ತು.

ಈ ಖುಲಾಸೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮಂಡಳಿ ಈಗ ನಿರ್ಧರಿಸಿದೆ ಎಂದು ಎಐಎಂಪಿಎಲ್‌ಬಿ ಕಾರ್ಯಕಾರಿ ಸದಸ್ಯ ಹಾಗೂ ವಕ್ತಾರ ಸಯ್ಯದ್ ಖಾಸಿಲ್ ರಸೂಲ್ ಇಲ್ಯಾಸ್ ಅವರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಬಾಬರಿ ಮಸೀದಿ ಧ್ವಂಸ ಕ್ರಿಮಿನಲ್ ಕೃತ್ಯ ಎಂದು ಒಪ್ಪಿಕೊಂಡಿದೆ. ಆದುದರಿಂದ ನಾವು ನಿಶ್ಚಿತವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

 ಬಾಬರಿ ಮಸೀದಿ ಧ್ವಂಸ ಕಾನೂನಿನ ನಿಯಮದ ಗಂಭೀರ ಉಲ್ಲಂಘನೆ. ಆದರೆ, ಆರೋಪಿಗಳು ಇನ್ನೂ ಕಾನೂನಿನ ವ್ಯಾಪ್ತಿಯಿಂದ ಹೊರಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠ ನೀಡಿದ ಚಾರಿತ್ರಿಕ ಆಯೋಧ್ಯೆ ತೀರ್ಪು ವ್ಯಾಖ್ಯಾನಿಸಿತ್ತು ಎಂದು ಅವರು ತಿಳಿಸಿದ್ದಾರೆ.

Similar News