ಪ.ಬಂಗಾಳ:ಸ್ಫೋಟದಲ್ಲಿ ಇಬ್ಬರಿಗೆ ಗಂಭೀರ ಗಾಯ

Update: 2022-12-07 16:58 GMT

ಕೋಲ್ಕತಾ,ಡಿ.7: ಪ.ಬಂಗಾಳದ ಉತ್ತರ 24 ಪರಗಣಗಳ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ ಮಹಿಳೆ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಿಫಾ ಗ್ರಾ.ಪಂ.ವ್ಯಾಪ್ತಿಯ ರಾಮನಗರದ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು,ಸೋನಿಯಾ ಬೀಬಿ ಮತ್ತು ಆಕೆಯ ಮೈದುನ ರಕಿಬುಲ್ಲಾ ಮಂಡಲ್ ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಈ ಅನಾಹುತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸಮೀಪದ ಮೈದಾನದಿಂದ ಚೆಂಡಿನಂತಹ ವಸ್ತುವನ್ನು ಮನೆಗೆ ತಂದಿದ್ದ ಹದಿಹರೆಯದ ರಕಿಬುಲ್ಲಾ ಅದರೊಂದಿಗೆ ಆಟವಾಡುತ್ತಿದ್ದಾಗ ಅದು ಸ್ಫೋಟಿಸಿದೆ ಎಂದು ಹೇಳಿರುವ ಸ್ಥಳೀಯರು, ಅದು ಕಚ್ಚಾ ಬಾಂಬ್ ಆಗಿದ್ದಿರಬಹುದು ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಾವು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Similar News