ಮನುಕುಲ ಸಾಮೂಹಿಕ ವಿನಾಶದ ಅಸ್ತ್ರವಾಗಿ ಮಾರ್ಪಟ್ಟಿದೆ: ವಿಶ್ವಸಂಸ್ಥೆ ಎಚ್ಚರಿಕೆ

Update: 2022-12-07 17:12 GMT

ಮಾಂಟ್ರಿಯಲ್, ಡಿ.7: ಬಹುರಾಷ್ಟ್ರೀಯ ಸಂಸ್ಥೆಗಳು ವಿಶ್ವದ ಪರಿಸರ ವ್ಯವಸ್ಥೆಯನ್ನು ಲಾಭದ ಉದ್ದೇಶದ ಆಟದ ವಸ್ತುಗಳಾಗಿ ಮಾರ್ಪಡಿಸಿವೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಮಂಗಳವಾರ ಟೀಕಿಸಿದ್ದು, ಈ ಕ್ರಮವನ್ನು ಸರಿಪಡಿಸಲು ವಿಫಲವಾದರೆ ದುರಂತದ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ಪರಿಶೀಲಿಸದ ಮತ್ತು ಅಸಮಾನ ಆರ್ಥಿಕ ಬೆಳವಣಿಗೆಗೆ ನಮ್ಮ ಅಂತ್ಯವಿಲ್ಲದ ಆಕಾಂಕ್ಷೆಯು ಮನುಕುಲವನ್ನು ಸಾಮೂಹಿಕ ವಿನಾಶದ ಅಸ್ತ್ರವಾಗಿ ಮಾರ್ಪಡಿಸಿದೆ ಎಂದವರು ಹೇಳಿದ್ದಾರೆ. ಕೆನಡಾದ ಮಾಂಟ್ರಿಯಲ್‌ನಲ್ಲಿ ಡಿಸೆಂಬರ್ 7ರಿಂದ 19ರವರೆಗೆ ನಡೆಯುವ ಪರಿಸರಕ್ಕೆ ಸಂಬಂಧಿಸಿದ ಸಿಒಪಿ15 ಜೀವವೈವಿಧ್ಯ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಮಾರು 200 ದೇಶಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಸವಾಲುಗಳು ಬೆದರಿಸುವ ಮಟ್ಟದಲ್ಲಿವೆ. 1 ದಶಲಕ್ಷ ತಳಿಗಳು ಅಳಿವಿನ ಅಪಾಯದಲ್ಲಿವೆ. ಭೂಮಿಯಲ್ಲಿನ ಮೂರನೇ ಒಂದು ಭಾಗವು ಹಾಳಾಗುತ್ತಿದೆ ಮತ್ತು ಫಲವತ್ತಾದ ಮಣ್ಣು ನಶಿಸುತ್ತಿದೆ. ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯು ಸಾಗರಗಳ ಅವನತಿಯನ್ನು ಕ್ಷಿಪ್ರಗೊಳಿಸುತ್ತಿದೆ. ರಾಸಾಯನಿಕಗಳು, ಪ್ಲಾಸ್ಟಿಕ್ಸ್‌ಗಳು ಮತ್ತು ವಾಯುಮಾಲಿನ್ಯವು ಭೂಮಿ, ನೀರು ಮತ್ತು ಗಾಳಿಯ ಉಸಿರುಗಟ್ಟಿಸುತ್ತಿವೆ. ಪಳೆಯುಳಿಕೆ ಇಂಧನದ ಬಳಕೆಯಿಂದ ಉಂಟಾಗುವ ತಾಪಮಾನವು ಹವಾಮಾನ ಅಸ್ತವ್ಯಸ್ತತೆಗೆ ಕಾರಣವಾಗುತ್ತದೆ. ನಾವು ಪ್ರಕೃತಿಯನ್ನು ಶೌಚಾಲಯದಂತೆ ಪರಿಗಣಿಸುತ್ತಿದ್ದೇವೆ ಎಂದು ಗುಟೆರಸ್ ಹೇಳಿದ್ದಾರೆ.

ಪ್ಯಾರಿಸ್ ಒಪ್ಪಂದವು ಯಶಸ್ವಿಯಾಗಲು, ಜೀವವೈವಿಧ್ಯವೂ ಯಶಸ್ವಿಯಾಗಬೇಕು. ಹವಾಮಾನ ಯಶಸ್ವಿಯಾಗಬೇಕಿದ್ದರೆ ಪ್ರಕೃತಿ ಯಶಸ್ವಿಯಾಗಬೇಕು. ಅದಕ್ಕಾಗಿ ನಾವು ಅವುಗಳೊಂದಿಗೆ ಒಟ್ಟಾಗಿ ವ್ಯವಹರಿಸಬೇಕಿದೆ ಎಂದು ವಿಶ್ವಸಂಸ್ಥೆಯ ಜೀವವೈವಿಧ್ಯ ಘಟಕದ ಮುಖ್ಯಸ್ಥೆ ಎಲಿಝಬೆತ್ ಮ್ರೆಮಾ ಹೇಳಿದ್ದಾರೆ.

Similar News