ಗಡಿ ವಿವಾದ: ಅಮಿತ್ ಶಾ ಮೊರೆ ಹೋದ ಮಹಾರಾಷ್ಟ್ರ ಸರ್ಕಾರ

Update: 2022-12-08 03:12 GMT

ಮುಂಬೈ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಹಿಂಸಾಚಾರ ಭುಗಿಲೆದ್ದ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳಿಂದ ತೀವ್ರ ವಾಗ್ದಾಳಿ ಎದುರಿಸಿದ ಬಳಿಕ, ಗಡಿ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಮಹಾರಾಷ್ಟ್ರ ಸರ್ಕಾರ ಗೃಹಸಚಿವ ಅಮಿತ್ ಶಾ ಅವರನ್ನು ಕೋರಿದೆ.

ಬುಧವಾರ ರಾತ್ರಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಮಿತ್ ಶಾ ಜತೆಗೆ ದೂರವಾಣಿಯಲ್ಲಿ ಮಾತನಾಡಿ ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಂಡರು ಎಂದು timesofindia.com ವರದಿ ಮಾಡಿದೆ.

ಸಂಸತ್ತಿನಲ್ಲಿ ಕೂಡಾ ಗಡಿ ಉದ್ವಿಗ್ನತೆ ಪ್ರತಿಧ್ವನಿಸಿದ್ದು, ಶಿವಸೇನೆ ಹಾಗೂ ಎನ್‍ಸಿಪಿ ಸಂಸದರು ಪ್ರತಿಭಟನೆ ನಡೆಸಿದರು. ಎನ್‍ಸಿಪಿಯ ಸುಪ್ರಿಯಾ ಸುಳೆ ಕೂಡಾ ಅಮಿತ್ ಶಾ ಮಧ್ಯಸ್ಥಿಕೆಗೆ ಒತ್ತಾಯಿಸಿದರು.

"ನಾನು ಅಮಿತ್ ಶಾ ಅವರ ಜತೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ವಿವರಿಸಿದ್ದೇನೆ. ವಿನಾ ಕಾರಣ ಮಹಾರಾಷ್ಟ್ರ ವಾಹನಗಳ ಮೇಲೆ ದಾಳಿ ನಡೆದಿರುವುದು ಸರಿಯಲ್ಲ. ಈ ಬಗ್ಗೆ ಕರ್ನಾಟಕ ಸಿಎಂ ಜತೆ ಚರ್ಚಿಸಲಾಗಿದೆ ಎಂದೂ ಹೇಳಿದ್ದೇನೆ. ತಕ್ಷಣವೇ ಗಡಿಯಲ್ಲಿ ವಾಹನಗಳ ಮೇಲೆ ನಡೆಯುವ ದಾಳಿಯನ್ನು ನಿಲ್ಲಿಸುವಂತೆ ಕರ್ನಾಟಕದ ಸಿಎಂ ಬೊಮ್ಮಾಯಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಕೋರಿದ್ದೇನೆ" ಎಂದು ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದರು. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News