ಶ್ರೇಷ್ಠತೆಯ ಮಾನದಂಡ ‘ಚಾರಿತ್ರ್ಯ’ವೇ ಹೊರತು ಜ್ಞಾನವಲ್ಲ

Update: 2022-12-08 06:57 GMT

ಚಾರಿತ್ರವಿಲ್ಲದ ಜ್ಞಾನ ಮತ್ತು ವೌಲ್ಯವಿಲ್ಲದ ಧರ್ಮವನ್ನು ಮಕ್ಕಳಿಗೆ, ಸಮಾಜಕ್ಕೆ ಧಾರೆ ಎರೆಯುವುದು ಕಪಟತನಕ್ಕೆ ಮೊದಲು ದೇವರಿಗೆ ದೀಪ ಹಚ್ಚಿ ಹೊರಟಂತೆ, ವಂಚನೆಗೆ ಮೊದಲು ಗರ್ಭಗುಡಿಗೆ ಪ್ರದಕ್ಷಿಣೆ ಹಾಕಿದಂತೆ.

ಬೆಂಗಳೂರಿನ ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ ಮೊಬೈಲ್ ಚೆಕ್ ಮಾಡಲು ಹೋದಾಗ ಕಾಂಡೊಮ್‌ಗಳು, ಗರ್ಭ ನಿರೋಧಕ ಮಾತ್ರೆಗಳು ಸಿಕ್ಕಿರುವ ಸಂಗತಿ ಮಕ್ಕಳ ಮಾನಸಿಕ ಸ್ಥಿತಿಯ ಬಗ್ಗೆ ಹೆಚ್ಚೆಚ್ಚು ಚರ್ಚೆ ಮತ್ತು ಆತಂಕವನ್ನು ಹುಟ್ಟುಹಾಕಿದೆ.

ಬೆಂಗಳೂರಿನ ಅನುಕೂಲಸ್ಥ, ಸಂಸ್ಕಾರ ವಂತ ಕುಟುಂಬಗಳ ದಂಪತಿ ಏಕಾಏಕಿ ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ, ನೇಣಿಗೆ ಕೊರಳೊಡ್ಡಿದ ಅದೆಷ್ಟೋ ಪ್ರಕರಣಗಳ ಗರ್ಭದಲ್ಲಿ ಏಡ್ಸ್ ಸದ್ದಿಲ್ಲದೆ ಮಲಗಿದ್ದನ್ನು ಪೊಲೀಸ್ ಕಡತಗಳು ಹೇಳುತ್ತಿವೆ.

 ಆರ್ಥಿಕವಾಗಿ ಸ್ವಾವಲಂಬಿಗಳಾದ ಪ್ರತಿಷ್ಠಿತ ಕುಟುಂಬಗಳ ಅಪ್ಪ-ಅಮ್ಮನ ಯಡವಟ್ಟುಗಳು ಮೆಗಾ ಧಾರಾವಾಹಿಗಳ ಸರಕುಗಳಾಗಿ ಮಾತ್ರ ಉಳಿದಿಲ್ಲ. ಅವು ಪತ್ನಿ ಮತ್ತು ಪ್ರಿಯಕರನಿಂದ ಪತಿಯ ಕೊಲೆ, ಪತ್ನಿಯ ಚಾರಿತ್ರ ಶಂಕಿಸಿ ಪತಿಯಿಂದ ಕೊಲೆ, ಪ್ರೇಯಸಿಯ ಜತೆ ಸಿಕ್ಕಿಬಿದ್ದ ಪತಿಯನ್ನು ರೆಡ್ ಹ್ಯಾಂಡಾಗಿ ಹಿಡಿದ ಪತ್ನಿ, ಗಂಡ ಇಲ್ಲದಿದ್ದಾಗ ಪ್ರಿಯಕರನ ಜತೆ ಮಲಗಿದ್ದನ್ನು ಕಂಡ ಮಗಳ ತಲೆಯನ್ನು ಕುಕ್ಕರ್‌ನಿಂದ ಜಜ್ಜಿ ಕೊಲೆ ಮಾಡಿದ ತಾಯಿ... ಇಂಥಾ ಹೆಡ್‌ಲೈನ್ ಸುದ್ದಿಗಳು ಹೆಚ್ಚು ಕಡಿಮೆ ಪ್ರತೀ ದಿನ ಪತ್ರಿಕೆಗಳಲ್ಲಿ ವರದಿಗಳಾಗುತ್ತಲೇ ಇವೆ.

ಇಂತಹ ಬಿಡಿ-ಬಿಡಿ ಹತ್ಯೆ-ಆತ್ಮಹತ್ಯೆ ಘಟನೆಗಳನ್ನು ಇಡಿ-ಇಡಿ ಯಾಗಿ ನೋಡಿದಾಗಲಷ್ಟೆ ಮಕ್ಕಳ ಶಾಲಾ ಬ್ಯಾಗ್‌ಗಳಲ್ಲಿ ಕಾಂಡೊಮ್ ಗಳು ಮತ್ತು ಗರ್ಭ ನಿರೋಧಕ ಮಾತ್ರೆಗಳು ಸಾಲುಗಟ್ಟಿರುವುದರ ಹಿಂದಿನ ನಿಗೂಢಗಳು ಇನ್ನಷ್ಟು ಸ್ಪಷ್ಟವಾಗಿ ಅರಿವಿಗೆ ಬರುತ್ತವೆ. ಅಷ್ಟಕ್ಕೂ ಈ ಕಾಂಡೊಮ್‌ಗಳು ಮತ್ತು ಮಾತ್ರೆಗಳು ಜಾಗ ಮಾಡಿ ಕೊಂಡಿದ್ದು ಖಾಸಗಿ ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ ಎನ್ನುವುದು ಗಮನಾರ್ಹವಾದ ಸಂಗತಿ. ಸರಕಾರಿ ಶಾಲಾ ಮಕ್ಕಳ ಬ್ಯಾಗ್‌ಗಳನ್ನು ಕೊಡವಿದರೆ ಸಿಗುವ ಒಣಗಿದ ರೊಟ್ಟಿ ಪೀಸ್‌ಗಳು, ಬ್ರೆಡ್ಡು-ಬಿಸ್ಕತ್ತಿನ ಪುಡಿಗಳಷ್ಟೆ ಸಹಜವಾಗಿ ಖಾಸಗಿ ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ ಕಾಂಡೊಮ್‌ಗಳು ಸಿಕ್ಕಿವೆ. ಇವುಗಳ ಪಕ್ಕದಲ್ಲೇ ಖಿನ್ನತೆಗೆ ಒಳಗಾಗುವ, ಬಹು ಮಹಡಿ ಕಟ್ಟಡ ಗಳ ಬಾಲ್ಕನಿಗಳಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳ ಚಿತ್ರಣ ಗಳೂ ನಿತ್ಯ ದಾಖಲಾಗುತ್ತಿವೆ ಎನ್ನುವುದು ಆಪ್ತ ಸಮಾಲೋಚಕ ರೊಬ್ಬರ ಮಾತು. ಪ್ರತಿಷ್ಠಿತ ಶಾಲಾ ಮಕ್ಕಳ ಬ್ಯಾಗ್ ಮತ್ತು ಜೇಬು ಗಳಲ್ಲಿ ಡ್ರಗ್ಸ್‌ಗಳು ಹೇರಳವಾಗಿ ಸಿಗುತ್ತವೆ.

ಡ್ರಗ್ಸ್‌ನ ಚಟ ಬಳಿಕ ಅವರನ್ನು ಸೆಕ್ಸ್‌ನ ಚಟಕ್ಕೂ ಬೆರಳಿಡಿದು ಕರೆದುಕೊಂಡು ಹೋಗುತ್ತಿರುವ ಉದಾಹರಣೆಗಳು ಸಾವಿರದಷ್ಟಿವೆ. ಶಾಲಾ- ಕಾಲೇಜು ಮಕ್ಕಳ ಜೇಬಿಗೆ ಕೈಹಾಕಿ ಹುಡುಕುವ ಧೈರ್ಯವನ್ನು ಶಿಕ್ಷಕರು ಮಾಡಿಲ್ಲ ಎನ್ನುವುದು ಪೊಲೀಸ್ ಅಧಿಕಾರಿಯೊಬ್ಬರ ಮಾತು. ಕೆಲವೇ ವರ್ಷಗಳ ಹಿಂದೆ ಖಾಸಗಿ ಕಾಲೇಜು, ಹಾಸ್ಟೆಲ್‌ಗಳಲ್ಲಿ ಅತೀ ಸಾಮಾನ್ಯವಾಗಿದ್ದ ಈ ಸಂಗತಿಗಳು ಈಗ ಶಾಲಾ ಮಕ್ಕಳ ಬ್ಯಾಗು-ಜೇಬುಗಳಲ್ಲಿ ಕಾಮನ್ ಆಗುತ್ತಿವೆ.

 ಪ್ರತಿಷ್ಠೆ ಮತ್ತು ಶ್ರೇಷ್ಠತೆಯ ಮಾನದಂಡ ಚಾರಿತ್ರ ಆಗುವ ಬದಲಿಗೆ ಜ್ಞಾನ ಆಗಿದ್ದು ಈ ಎಲ್ಲಾ ಸಂಗತಿಗಳ ಮೂಲವೂ ಆಗಿದೆ.ಬ್ಯಾಗುಗಳಲ್ಲಿ ಕಾಂಡೊಮ್ ಮತ್ತು ಗರ್ಭ ನಿರೋಧಕ ಮಾತ್ರೆಗಳನ್ನು ಜೋಡಿಸಿಟ್ಟುಕೊಂಡ ಬಾಲಕಿಯರು, ಬಾಲಕರು ದಡ್ಡರಲ್ಲ. ವಿದ್ಯಾವಂತರು ಮತ್ತು ಜ್ಞಾನದ ದಾಹ ತೀರಿಸಿಕೊಳ್ಳುತ್ತಿರುವವರೇ. ನಿತ್ಯ ಬೆಳಗ್ಗೆ ಪೂಜೆ-ಪುನಸ್ಕಾರ ನಡೆಸುವ ಸಭ್ಯ ಸಂಸಾರಗಳ ಮಕ್ಕಳೇ ಆಗಿದ್ದಾರೆ.

ಮಕ್ಕಳನ್ನು ಜ್ಞಾನದ ದಾವಂತಕ್ಕೆ ತಳ್ಳಿದ ತಂದೆ-ತಾಯಿ ಯರು ತಮ್ಮ ಇಗೋ ಮತ್ತು ವಿವೇಚನಾರಹಿತ ನಡವಳಿಕೆಗಳಿಂದ ಮಕ್ಕಳನ್ನು ಘಾಸಿಗೊಳಿಸುತ್ತಿರುವುದನ್ನು ಪಕ್ಕಕ್ಕಿಟ್ಟು ಬ್ಯಾಗ್‌ಗಳಲ್ಲಿ ಸಿಕ್ಕ ಗರ್ಭ ನಿರೋಧಕ ಮಾತ್ರೆಗಳ ಮರ್ಮವನ್ನು ಚರ್ಚಿಸುವುದು ಅಂತರಂಗ ಶುದ್ಧವಿಲ್ಲದ ಚರ್ಮಶುದ್ಧಿಯ ಸಂಸ್ಕಾರದಂತೆ. ಮಕ್ಕಳು ಬೆಳೆದಂತೆ ತಂದೆ-ತಾಯಿಯರಲ್ಲಿ ಮಕ್ಕಳ ಬಗೆಗಿನ ಭಾವನೆ ಮತ್ತು ಗೌರವ ಬೆಳೆಯದೇ ಇರುವುದು, ಮಕ್ಕಳ ಅಭಿಪ್ರಾಯಗಳಿಗೆ ಮಾನ್ಯತೆ ಇಲ್ಲದಂತೆ ಅವರ ಅಸಹಾಯಕತೆ ಯನ್ನೇ ಬಂಡವಾಳ ಮಾಡಿಕೊಂಡು ಬೆದರಿಸಿ, ಬ್ಲಾಕ್‌ಮೇಲ್ ಮಾಡಿ ಬಾಯಿ ಮುಚ್ಚಿಸುವ ಪೋಷಕರು, ಮಕ್ಕಳ ಮಾತನ್ನು ಕೇಳಿಸಿಕೊಳ್ಳದ, ಕೇಳಿಸಿಕೊಂಡರೂ ತಮಗೆ ಬೇಕಾದ್ದನ್ನು ಮಾತ್ರ ಮಕ್ಕಳು ಬಾಯಿ ಬಿಡುವಂತೆ ಬೇಲಿ ಕಟ್ಟಿರುವ, ನಿನ(ಮ)ಗಾಗಿ ದುಡಿಯುತ್ತಿದ್ದೇನೆ ಎಂದು ಮಕ್ಕಳ ಎದುರಿಗೆ ಫೋಸು ಕೊಟ್ಟು ಹೆಣ್ಣು-ಹೆಂಡದ ನೈವೇದ್ಯ ದ ಸಂಸ್ಕಾರದಲ್ಲಿ ಮುಳುಗಿರುವ ತಂದೆಯರು, ತಮ್ಮ ತೀಟೆ ಒತ್ತಡ ವನ್ನು ಮಕ್ಕಳ ಮೇಲೆ ಪ್ರಯೋಗಿಸುವ ಅಪ್ಪ-ಅಮ್ಮನ ಭಯಾನಕ ಅಹಂಕಾರಗಳು ಮಕ್ಕಳನ್ನು ಮಾನಸಿಕವಾಗಿ ಅನಾಥ ಮಾಡುತ್ತಿವೆ.

ಆರು ವರ್ಷ ದಾಟಿದ ಪ್ರತೀ ಮಗುವಿಗೂ ಅಪ್ಪ-ಅಮ್ಮನ ಹೆಜ್ಜೆಗಳು ಸ್ಪಷ್ಟವಾಗಿ ಅರ್ಥವಾಗುತ್ತದೆ. ಆದರೆ ತಮಗೆ ಅರ್ಥ ಆಗಿದ್ದನ್ನು ವ್ಯಕ್ತಪಡಿಸುವ ಸಾಮರ್ಥ್ಯ ಬೆಳೆದಿರುವುದಿಲ್ಲ ಅಷ್ಟೆ. ಮಕ್ಕಳು ವ್ಯಕ್ತ ಪಡಿಸುವುದಿಲ್ಲ ಅಂದ ಮಾತ್ರಕ್ಕೆ ಅವರಿಗೆ ಏನೂ ಗೊತ್ತಿಲ್ಲ ಎಂದು ತಿಳಿಯುವುದು ಅಪ್ಪ-ಅಮ್ಮನ ಅಹಂಕಾರ ಸೃಷ್ಟಿಸಿದ ದಡ್ಡತನ ಎನ್ನುವ ಹಲವಾರು ಸಮೀಕ್ಷೆಗಳು ಬಂದಿವೆ. ಪರಪುರುಷನ ಸಹವಾಸಕ್ಕೆ ಜಾರಿದ ಅಮ್ಮ ಮಾಡುತ್ತಿರುವ ಮೋಸದ ಅರಿವಿದ್ದೂ ಅಮ್ಮನ ನಾಟಕಗಳನ್ನು ಅಪ್ಪನಿಗೆ ಹೇಳಲಾಗದೆ ಒಳಗೊಳಗೇ ಕೊರಗುವ ಮಕ್ಕಳು, ಅಮ್ಮನಿಗೆ ದ್ರೋಹ ಎಸಗುವ ಅಪ್ಪನ ವರ್ತನೆಗಳನ್ನು ಗಮನಿಸಿಯೂ ಅದನ್ನು ಅಮ್ಮನಿಗೆ ಹೇಳಲಾಗದ ಮಕ್ಕಳ ಸಂಕಟಗಳನ್ನು ಅವರ ಶಾಲಾ ಬ್ಯಾಗ್‌ಗಳಲ್ಲಿ ಸಿಕ್ಕ ಕಾಂಡೊಮ್‌ಗಳು ಹೇಳುತ್ತಿವೆ.  

ಮಕ್ಕಳಾದ ಮೇಲಿನ ಪೋಷಕರ ಕುಟುಂಬದಾಚೆಯ ಸಾಹಸಗಳು, ಕೆಲಸ-ದುಡಿಮೆಯ ಒತ್ತಡಗಳು ಮಕ್ಕಳ ಮೇಲಿನ ಒಲವನ್ನು, ಮಕ್ಕಳ ಬಗೆಗಿನ ಗಮನವನ್ನು ಕಡಿಮೆ ಮಾಡುತ್ತವೆ. ಇದರಿಂದ ಅಭದ್ರತೆಗೆ ಒಳಗಾಗುವ ಮಕ್ಕಳ ಅಸಹನೆ ಬೇರೆ ಬೇರೆ ರೂಪದಲ್ಲಿ ಮನೆಯ ಒಳಗೇ ಪ್ರಕಟಗೊಳ್ಳುತ್ತವೆ. ಆದರೆ ತಮಗೆ ಬೇಕಾದ್ದನ್ನು ಸ್ವಂತಕ್ಕೆ ದಕ್ಕಿಸಿಕೊಳ್ಳಲಾಗದ, ಎಲ್ಲದಕ್ಕೂ ಪೋಷಕರ ಮೇಲೆಯೇ ಅವಲಂಬಿತವಾಗಬೇಕಾದ ಮಕ್ಕಳ ಅಸಹಾಯಕತೆಗಳನ್ನು ಬಂಡವಾಳ ಮಾಡಿಕೊಂಡು ಮಕ್ಕಳನ್ನು ಸುಮ್ಮನಾಗಿಸದೆ ಅವರ ಮಾತನ್ನು ಸಹನೆಯಿಂದ ಕೇಳಿಸಿಕೊಳ್ಳುವ ಅಸಾಧ್ಯ ವ್ಯವದಾನ ತಂದೆ- ತಾಯಿಯರಿಗೆ ಇರಬೇಕು. ಮಕ್ಕಳ ಬಾಯಿ ಮುಚ್ಚಿಸಿದರೂ ಅವರೊಳಗೆ ಅಸಹನೆ-ಅಸಹಾಯಕತೆ ಬಾಕಿ ಉಳಿದಿರುತ್ತದೆ. ಅದು ಇನ್ನಷ್ಟು ಆಳವಾಗಿ ಹೆಪ್ಪುಗಟ್ಟಿರುತ್ತದೆ.

ಮನೆಯಲ್ಲಿ ತಮ್ಮ ಪಾಲಿನ ಪ್ರೀತಿಯನ್ನು ಕಳೆದುಕೊಂಡ ಮಕ್ಕಳು ಅದನ್ನು ಮನೆಯ ಹೊರಗೆ ಹುಡುಕಲು ಶುರು ಮಾಡುತ್ತಾರೆ. ಅದಕ್ಕೆ ಬೆರಳ ತುದಿಯಲ್ಲಿ ಮೊಬೈಲ್‌ಗಳ ಮೂಲಕ ಸಿಗುವ ಜ್ಞಾನವೂ ಕೆಲಸ ಮಾಡುತ್ತದೆ. ಬ್ಯಾಗುಗಳಲ್ಲಿ ಸಿಕ್ಕ ಪ್ರತಿಯೊಂದು ಕಾಂಡೊಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಹಿಂದೆ ಇಂಥವೇ ಹಲವಾರು ಕತೆಗಳಿರುತ್ತವೆ ಎನ್ನುತ್ತಾರೆ ಆಪ್ತ ಸಮಾಲೋಚಕರು. ಹೀಗಾಗಿ ಇಲ್ಲಿ ಚರ್ಚೆ ನಡೆಯಬೇಕಾದ್ದು ಬ್ಯಾಗುಗಳನ್ನು ಹೊರುವ ಮಕ್ಕಳ ಮಾನಸಿಕತೆ ಬಗ್ಗೆ ಮಾತ್ರವಲ್ಲ. ಈ ಮಕ್ಕಳ ತಂದೆ-ತಾಯಿಯರಜಾರಿದ ಚಾರಿತ್ರದ ಬಗ್ಗೆಯೂ ಆಪ್ತ ಸಮಾಲೋಚನೆ ಅಗತ್ಯವಿದೆ.

ಸಂಸಾರ ಮತ್ತು ಕುಟುಂಬಗಳೊಳಗಿನ ಈ ರಾಮಾಯಣ, ಮಹಾಭಾರತಗಳು ಸಮಾಜದಲ್ಲೂ ಬೇರೆಯದ್ದೇ ರೀತಿಯಲ್ಲಿ ಅನೈತಿಕ ಯುದ್ಧಗಳಿಗೆ ಕಾರಣವಾಗಿವೆ. ನೈತಿಕತೆ ಬೋಧಿಸುವ ಆಧ್ಯಾತ್ಮಿಕ ಕೇಂದ್ರಗಳು ಹಾದರ ಮತ್ತು ಅತ್ಯಾಚಾರದ ಅಡ್ಡೆಗಳಾಗಿರುವುದು ನಿತ್ಯ ವರದಿ ಆಗುತ್ತಿವೆ. ಧರ್ಮ ಎಂದರೆ ವೌಲ್ಯ ಎನ್ನುವುದನ್ನೇ ಮರೆತು ಧರ್ಮದ ಬಗ್ಗೆ ಭಯಾನಕ ಭಾಷಣ ಕೊಚ್ಚುವವರು ಬೀದಿ ಬೀದಿಗಳಲ್ಲಿ ಸಿಗುತ್ತಾರೆ. ಆದರೆ ಧರ್ಮದ ಭಾಷಣಕಾರರು ಯಾರೂ ಧರ್ಮವಂತರಾಗಿ ಬದುಕುತ್ತಿಲ್ಲವಲ್ಲ ಏಕೆ? ಎನ್ನುವ ಕಾಮನ್‌ಸೆನ್ಸ್ ಪ್ರಶ್ನೆಯನ್ನು ಯಾರೂ ಕೇಳುತ್ತಿಲ್ಲ. ಈ ಕಾರಣಕ್ಕೇ ಸಾಮೂಹಿಕ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿ ಅವರನ್ನು ಜಾತಿ ವ್ಯಸನದ ಹೇಸಿಗೆಯ ಮೇಲೆ ಕೂರಿಸಿ ಅವರನ್ನೇ ಸಂಸ್ಕಾರವಂತರು ಎಂದು ಬಿಂಬಿಸುವ ನಿರ್ಲಜ್ಜತನವೂ ಬಹಿರಂಗವಾಗಿ ಆಚರಿಸಲ್ಪಡುತ್ತದೆ. ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಜೈಲಿಗೆ ಹೋದ ಆಧ್ಯಾತ್ಮಿಕ ಗುರುವೊಬ್ಬ ಪರೋಲ್ ಮೇಲೆ ಹೊರಗೆ ಬಂದು ಸತ್ಸಂಗ ನಡೆಸಿದರೆ ಅವನ ಸತ್ಸಂಗಕ್ಕೂ ದುರ್ಜನರು ಸಾಲುಗಟ್ಟಿ ನಿಲ್ಲುತ್ತಾರೆ.

ಚಾರಿತ್ರವಿಲ್ಲದ ಜ್ಞಾನ ಮತ್ತು ವೌಲ್ಯವಿಲ್ಲದ ಧರ್ಮವನ್ನು ಮಕ್ಕಳಿಗೆ- ಸಮಾಜಕ್ಕೆ ಧಾರೆ ಎರೆಯುವುದು ಕಪಟತನಕ್ಕೆ ಮೊದಲು ದೇವರಿಗೆ ದೀಪ ಹಚ್ಚಿ ಹೊರಟಂತೆ, ವಂಚನೆಗೆ ಮೊದಲು ಗರ್ಭಗುಡಿಗೆ ಪ್ರದಕ್ಷಿಣೆ ಹಾಕಿದಂತೆ.

ಅನೈತಿಕ ಸಾಹಸಗಳ ತಾತ್ಕಾಲಿಕ ಸುಖಗಳು ಶಾಶ್ವತ ನರಳುವಿಕೆಯಲ್ಲಿ ಕೊನೆಗೊಳ್ಳುತ್ತವೆ. ಶ್ರೇಷ್ಠತೆಯ ಮಾನದಂಡ ಚಾರಿತ್ರವೇ ಹೊರತು ಗೊಡ್ಡು ಜ್ಞಾನವಲ್ಲ ಎನ್ನುವುದನ್ನು ಶಾಲಾ ಮಕ್ಕಳು ತಮ್ಮ ಅಪ್ಪ-ಅಮ್ಮನಿಗೆ ಹಾಗೂ ಈ ಸಮಾಜಕ್ಕೆ ಕಾಂಡೊಮ್ ಮತ್ತು ಗರ್ಭ ನಿರೋಧಕ ಮಾತ್ರೆಗಳ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ.

Similar News