ಭಾರತ್ ಜೋಡೊ ಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡ ವ್ಯಕ್ತಿಯಿಂದ ಆತ್ಮಹತ್ಯೆಗೆ ಯತ್ನ

Update: 2022-12-08 09:30 GMT

ಕೋಟಾ (ರಾಜಸ್ತಾನ): ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಸಾಗುವಾಗ ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡ ವ್ಯಕ್ತಿಯೋರ್ವ ರಾಜೀವ್ ಗಾಂಧಿ ಪ್ರತಿಮೆ ಬಳಿ ಆತ್ಮಾಹುತಿಗೆ ಯತ್ನಿಸಿರುವ ಘಟನೆ ವರದಿಯಾಗಿದೆ.

ಆದರೆ, ಸದರಿ ವ್ಯಕ್ತಿಯು ತನಗೆ ತಾನೇ ಬೆಂಕಿ ಹಚ್ಚಿಕೊಳ್ಳುವ ಮುಂಚೆ ಮಧ್ಯಪ್ರವೇಶಿಸಿರುವ ಜನರು ಹಾಗೂ ಭದ್ರತಾ ಸಿಬ್ಬಂದಿಗಳು ಸಂಭವಿಸಲಿದ್ದ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯು ರಾಜೀವ್ ಗಾಂಧಿ ನಗರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ನಗರದ ತಲ್ವಾಂಡಿ ಪ್ರದೇಶದ ರಿಯಲ್ ಎಸ್ಟೇಟ್ ವ್ಯಾಪಾರಿ ಕುಲ್ ದೀಪ್ ಶರ್ಮ (30) ಎಂದು ಗುರುತಿಸಲಾಗಿದೆ. ಈ ಘಟನೆಯನ್ನು ಕೋಟಾ ಬಿಜೆಪಿ ಯುವ ಘಟಕದ ಅಧ್ಯಕ್ಷ ಸುದರ್ಶನ್ ಗೌತಮ್ ದೃಢೀಕರಿಸಿದ್ದು, ಶರ್ಮ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದರು ಎಂದು ದೃಢೀಕರಿಸಿದ್ದಾರೆ. ಆದರೆ, ಪೊಲೀಸರು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದಾ ನಂತರ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸುತ್ತಿರುವ ಶರ್ಮರನ್ನು ರಕ್ಷಿಸಲು ಜನ ಸುತ್ತುವರಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತು.

ಶರ್ಮ ಬಿಜೆಪಿ ಅಥವಾ ಬಿಜೆಪಿಗೆ ಸಂಬಂಧಿಸಿದ ಯಾವುದೇ ಸಂಘಟನೆಗೆ ಸೇರಿದ ವ್ಯಕ್ತಿಯಲ್ಲ. ಆದರೆ, ಆತ ಬಿಜೆಪಿ ಕಾರ್ಯಕರ್ತರೊಂದಿಗೆ ಇರುತ್ತಿದ್ದ ಮತ್ತು ಗಾಂಧಿ ಕುಟುಂಬದ ವಿರುದ್ಧ ಅಸಮಾಧಾನಗೊಂಡಿದ್ದ ಎಂದು ಗೌತಮ್ ಹೇಳಿದ್ದಾರೆ.

Similar News