ಗುಜರಾತ್ ಚುನಾವಣೆಯಲ್ಲಿ ಪಡೆದಿರುವ ಮತ ಪ್ರಮಾಣದಿಂದ ಆಪ್ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ: ದಿಲ್ಲಿ ಡಿಸಿಎಂ

Update: 2022-12-08 10:10 GMT

ಹೊಸದಿಲ್ಲಿ: “ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಶಿಕ್ಷಣ ಮತ್ತು ಆರೋಗ್ಯ ಆಧಾರಿತ ರಾಜಕೀಯಕ್ಕೆ ಜನರು ಮನ್ನಣೆ ನೀಡಿದ್ದಾರೆ. ದೇಶದ ಜನರಿಗೆ ಅಭಿನಂದನೆಗಳು” ಎಂದು ದಿಲ್ಲಿ ಸರ್ಕಾರದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ ಇನ್ನೂ ಜಾರಿಯಲ್ಲಿದ್ದು, ಈ ಕುರಿತು ಟ್ವೀಟ್ ಮಾಡಿರುವ ಅವರು, ಗುಜರಾತ್ ಚುನಾವಣೆಯಲ್ಲಿ ಪಡೆದಿರುವ ಮತ ಪ್ರಮಾಣದಿಂದ ಆಪ್ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ” ಎಂದಿದ್ದಾರೆ.

ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕಿಂತ ಬಹಳ ದೂರವಿದ್ದರೂ, ಆಪ್ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಪ್ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲು ಗುಜರಾತ್ ಚುನಾವಣೆಯಲ್ಲಿ ಎರಡು ಸ್ಥಾನ ಮತ್ತು ಶೇ. 6ರಷ್ಟು ಮತ ಪ್ರಮಾಣವನ್ನು ಗಳಿಸಬೇಕಿದೆ.

ಬಿಜೆಪಿ ಭದ್ರಕೋಟೆಯಾದ ಗುಜರಾತ್ ನಲ್ಲಿ ನೆಲೆ ಕಂಡುಕೊಳ್ಳಲು ಆಮ್ ಆದ್ಮಿ ಪಕ್ಷ ತೀವ್ರ ಪ್ರಯತ್ನಪಟ್ಟಿತ್ತಾದರೂ, ಮತಗಟ್ಟೆ ಸಮೀಕ್ಷೆಗಳಲ್ಲಿ ಅಂದಾಜಿಸಿದಂತೆ ಎರಡು ಅಂಕಿಯ ಸ್ಥಾನಗಳನ್ನು ಪಡೆಯುವುದು ಕಠಿಣವಾಗಿದೆ ಎಂಬುದು ಸದ್ಯದ  ಫಲಿತಾಂಶದಿಂದ ವ್ಯಕ್ತವಾಗುತ್ತಿದೆ. ಹೀಗಿದ್ದೂ ಫಲಿತಾಂಶವು ಆಪ್ ಪಾಲಿಗೆ ಮಹತ್ವದ್ದಾಗಿದ್ದು, ಅದು ಕನಿಷ್ಠ ಪಕ್ಷ ಎರಡು ಸ್ಥಾನಗಳನ್ನು ಗೆದ್ದರೂ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದೆ.

ರಾಷ್ಟ್ರ ರಾಜಕಾರಣದ ಮಹತ್ವಾಕಾಂಕ್ಷೆ ಹೊಂದಿರುವ ಆಪ್, ಗುಜರಾತ್ ವಿಧಾನಸಭೆಯ ಎಲ್ಲ 182 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 

Similar News