ಇವಿಎಂ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಕುತ್ತಿಗೆಗೆ ವಸ್ತ್ರ ಬಿಗಿದುಕೊಂಡು ಪ್ರತಿಭಟಿಸಿದ ಕಾಂಗ್ರೆಸ್ ಅಭ್ಯರ್ಥಿ

Update: 2022-12-08 10:26 GMT

ಅಹಮದಾಬಾದ್: ಗುಜರಾತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜಾರಿಯಲ್ಲಿರುವ ಬೆನ್ನಿಗೇ ಇಎಂವಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ, ಗಾಂಧಿಧಾಮ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭಾರತಿಭಾಯಿ ವೆಲ್ಜಿಭಾಯಿ ಸೋಲಂಕಿ ತಮ್ಮ ಕುತ್ತಿಗೆ ಸುತ್ತ ಮೇಲ್ವಸ್ತ್ರ ಬಿಗಿದುಕೊಂಡು ಪ್ರತಿಭಟಿಸಿರುವ ಘಟನೆ ವರದಿಯಾಗಿದೆ.

ಬಿಜೆಪಿ ಅಭ್ಯರ್ಥಿ ಮಾಲತಿ ಮಹೇಶ್ವರಿ ಎದುರು ಸದ್ಯ 12000 ಮತಗಳ ಹಿನ್ನಡೆ ಅನುಭವಿಸುತ್ತಿರುವ ಸೋಲಂಕಿ, ಇವಿಎಂಗಳನ್ನು ಸಮರ್ಪಕವಾಗಿ ಮೊಹರು ಮಾಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.

ಸಾಕಷ್ಟು ವಿಚಲಿತರಾಗಿದ್ದಂತೆ ಕಂಡು ಬಂದ ಸೋಲಂಕಿ, ಮತ ಎಣಿಕೆ ಸಂದರ್ಭದಲ್ಲಿ ಇವಿಎಂ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಮತ ಎಣಿಕೆ ಕೇಂದ್ರದೆದುರು ಧರಣಿ ನಡೆಸಿದರು. ನಂತರ ತಮ್ಮ ಕುತ್ತಿಗೆಯ ಸುತ್ತ ಮೇಲ್ವಸ್ತ್ರದಿಂದ ಬಿಗಿದುಕೊಂಡು ಪ್ರತಿಭಟಿಸಿದರು. ಇವಿಎಂ ದುರ್ಬಳಕೆ ಬಗ್ಗೆ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.

ಸಾಮಾನ್ಯವಾಗಿ ಮತ ಎಣಿಕೆ ನಡೆಯುವಾಗ, ಮತಗಳ ಪ್ರಮಾಣವನ್ನು ಮತ ಎಣಿಕೆ ಮೇಲ್ವಿಚಾರಕರು ಅರ್ಜಿಯೊಂದರಲ್ಲಿ ಭರ್ತಿ ಮಾಡುತ್ತಾರೆ. 17C ನಮೂನೆ ಅರ್ಜಿಯ ಎರಡನೆ ಭಾಗದಲ್ಲಿ ಯಾವುದೇ ಅಕ್ರಮ ಕಂಡು ಬರದಿದ್ದರೆ, ಅಧಿಕಾರಿಯು ಅದಕ್ಕೆ ಸಹಿ ಮಾಡುತ್ತಾರೆ. ನಂತರ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳಿಂದಲೂ ಅದಕ್ಕೆ ಸಹಿ ಮಾಡಿಸಿಕೊಂಡು ಚುನಾವಣಾಧಿಕಾರಿಗೆ ಸಲ್ಲಿಸುತ್ತಾರೆ. ಚುನಾವಣಾಧಿಕಾರಿ ಕೂಡಾ ಆ ಅರ್ಜಿಗೆ ಸಹಿ ಮಾಡಿ, ಅರ್ಜಿ ನಮೂನೆ 20ರಲ್ಲಿ ಫಲಿತಾಂಶದ ಹಾಳೆಯನ್ನು ಲಗತ್ತಿಸಿ ಅಧಿಕಾರಿಗೆ ಮರಳಿಸುತ್ತಾರೆ.

Similar News