ABVP ವಾಟ್ಸ್ ಆ್ಯಪ್ ಗುಂಪಿನಲ್ಲಿ ಮುಸ್ಲಿಮರ ನರಮೇಧ, ಮತಾಂತರದ ಬಗ್ಗೆ ಚರ್ಚಿಸುತ್ತಿರುವ ಚಾಟ್‍ಗಳ ಸೋರಿಕೆ: ವರದಿ

Update: 2022-12-08 13:58 GMT

ಹೊಸದಿಲ್ಲಿ:  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ABVP, ಬಿಜೆಪಿಯ ವಿದ್ಯಾರ್ಥಿ ಘಟಕ) ಇದರ ಸೋರಿಕೆಯಾಗಿದೆನ್ನಲಾದ ವಾಟ್ಸ್ ಆ್ಯಪ್ ಚಾಟ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ ಎಬಿವಿಪಿಯ ವಿದ್ಯಾರ್ಥಿ ಕಾರ್ಯಕರ್ತರು ಭಾರತದಲ್ಲಿ ಮುಸ್ಲಿಮರ ನರಮೇಧದ ಕುರಿತು ಚರ್ಚಿಸುತ್ತಿರುವುದು ತಿಳಿದು ಬಂದಿದೆ ಎಂದು sabrangindia.in ವರದಿ ಮಾಡಿದೆ.

ಈ ನಿರ್ದಿಷ್ಟ ಚಾಟ್ ದಿಲ್ಲಿ ಟೆಕ್ನಲಾಜಿಕಲ್ ಯುನಿವರ್ಸಿಟಿ (ಡಿಟಿಯು) ಇದರ ಎಬಿವಿಪಿ ವಾಟ್ಸ್ ಆ್ಯಪ್ ಗುಂಪಿನದು ಎಂದು ಹೇಳಲಾಗುತ್ತಿದೆ. ಅದರ ಹೆಸರು 'ಎಬಿವಿಪಿ ಡಿಟಿಯು ಫ್ರೆಶರ್ಸ್' ಎಂದಾಗಿದೆ. ಈ ಗುಂಪಿನ ಚಾಟ್ ಮತ್ತು ಸಂದೇಶಗಳ ಸ್ಕ್ರೀನ್‍ಶಾಟ್‍ಗಳು ಹರಿದಾಡುತ್ತಿದ್ದು ಅದರಲ್ಲಿ ಸದಸ್ಯರು ಮುಸ್ಲಿಮರ  ನರಮೇಧ ಮತ್ತು ಸಾಮೂಹಿಕ ಮತಾಂತರದ ಕುರಿತು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ "ಹೆಚ್ಚಿನ ಮುಸ್ಲಿಮರನ್ನ ನಿರ್ಮೂಲನಗೊಳಿಸಲು" ಬಾಂಬ್ ಸ್ಫೋಟ ನಡೆಸುವುದು ಅಥವಾ 'ಇತರ ಅವಘಡ' ನಡೆಸುವ ಬಗ್ಗೆ ಈ ಚಾಟ್‍ನಲ್ಲಿ ಒಬ್ಬ ಸಲಹೆ ನೀಡಿದ್ದರೆ ಇನ್ನೊಬ್ಬಾತ "ಭಗ್ವಾ ಲವ್ ಜಿಹಾದ್" ನಡೆಸಲು ಮುಸ್ಲಿಂ ಮಹಿಳೆಯರನ್ನು "ಖರೀದಿಸುವುದು ಅಥವಾ ಅಪಹರಣ" ನಡೆಸುವ ಕುರಿತು ಸಲಹೆ ನೀಡಿದ್ದಾನೆ.

ಮುಸ್ಲಿಂ ಸಮುದಾಯದ ವಿರುದ್ಧ ಪ್ರತೀಕಾರ ತೀರಿಸಲು ಸಾಮೂಹಿಕ ನರಮೇಧ ಅಥವಾ ಸಾಮೂಹಿಕ ಸಂತಾನಹರಣ ನಡೆಸಬೇಕು. ಹಿಂದು ಮಹಾಸಭಾ ಅಥವಾ ಬಲಪಂಥೀಯ ಹಿಂದುತ್ವ ಗುಂಪುಗಳು "ಮುಸ್ಲಿಂ ಯುವತಿಯರನ್ನು ಹೇಗೆ ವಿವಾಹವಾಗುವುದು ಹಾಗೂ ಅವರನ್ನು ಹಿಂದು ಧರ್ಮಕ್ಕೆ ಮತಾಂತರಿಸುವುದು" ಎಂಬ ಬಗ್ಗೆ ಕೋರ್ಸ್ ನಡೆಸಬೇಕು ಎಂದು ಮತ್ತೋರ್ವ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ ಎಂದು ವರದಿಯಾಗಿದೆ.

Similar News