ಹಿಮಾಚಲ ಪ್ರದೇಶ: ಬಿಜೆಪಿಗೆ ಮುಳುವಾದ ಬಂಡಾಯ ಅಭ್ಯರ್ಥಿಗಳು

Update: 2022-12-09 05:52 GMT

ಶಿಮ್ಲಾ: ಕಾಂಗ್ರೆಸ್ ಪಕ್ಷ ಹಿಮಾಚಲ ಪ್ರದೇಶದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಪ್ರತಿ ಚುನಾವಣೆ ನಡೆದಾಗಲೂ ಪಕ್ಷವನ್ನು ಬದಲಿಸುತ್ತಾ ಬಂದಿರುವ ಈ ರಾಜ್ಯದ ಸಂಪ್ರದಾಯ ಈ ಬಾರಿಯೂ ಮುಂದುವರಿದಿದೆ ಎಂದು ndtv.com ವರದಿ ಮಾಡಿದೆ.

ಬಿಜೆಪಿ ಈ ಸಂಪ್ರದಾಯವನ್ನು ಮುರಿಯಲು ಶತಾಯ ಗತಾಯ ಪ್ರಯತ್ನ ನಡೆಸಿತ್ತು. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ 50 ರ‍್ಯಾಲಿಗಳನ್ನು ನಡೆಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಐದು, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ 20 ರ‍್ಯಾಲಿ ನಡೆಸಿದ್ದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಂತೂ ಕಣ್ಣೀರು ಕೂಡಾ ಸುರಿಸಿದ್ದರು. ಆದರೆ ಬಿಜೆಪಿ ಸೋತಿದೆ. ಇದಕ್ಕೆ ಬಂಡಾಯ ಅಭ್ಯರ್ಥಿಗಳು ಕಾರಣವೇ ಎಂಬ ಅಂಶ ಇದೀಗ ಚರ್ಚೆಯಾಗುತ್ತಿದೆ.

ರಾಜ್ಯದ ಒಟ್ಟು 68 ವಿಧಾನಸಭಾ ಕ್ಷೇತ್ರಗಳ ಪೈಕಿ 21 ಕಡೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಈ ಪೈಕಿ ಇಬ್ಬರು ಗೆದ್ದಿದ್ದಾರೆ.  ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಹೋಶಿಯಾರ್ ಸಿಂಗ್  ದೆಹ್ರಾ ಕ್ಷೇತ್ರದಲ್ಲಿ 14 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರೆ, ಕೆ.ಎಲ್.ಠಾಕೂರ್ ನಾಲಗಢ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ.

ಇನ್ನು ಹಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಬಿಜೆಪಿಯ ಮತಬುಟ್ಟಿಗೆ ಕೈ ಹಾಕಿದ್ದರಿಂದ ಬಿಜೆಪಿ ಸೋಲು ಅನುಭವಿಸಬೇಕಾಯಿತು. ಉದಾಹರಣೆಗೆ ಕಿನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಜಗತ್ ಸಿಂಗ್ ನೇಗಿ ಗೆದ್ದಿದ್ದಾರೆ. ಇಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ತೇಜವಂತ ಸಿಂಗ್ ನೇಗಿ ಬಿಜೆಪಿ ಮತ ಕಸಿದಿದ್ದಾರೆ ಹಾಗೂ ತಮ್ಮ ಮಾಜಿ ಪಕ್ಷದ ಮತವನ್ನು ಗಣನೀಯವಾಗಿ ಇಳಿಸಿದ್ದಾರೆ.

ಇನ್ನೊಂದು ನಿದರ್ಶನವೆಂದರೆ ಇಂದೋರಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಮಲೇಂದರ್ ರಾಜನ್ ಗೆದ್ದಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಮನೋಹರ್ ಧೀಮನ್ ಇಲ್ಲಿ 4433 ಮತ ಪಡೆದಿದ್ದಾರೆ. ಧೀಮನ್ ಕಣದಲ್ಲಿಲ್ಲದಿದ್ದರೆ ಈ ಎಲ್ಲ ಮತ ಬಿಜೆಪಿಗೆ ದಕ್ಕುತ್ತಿತ್ತು. ಬಂಡಾಯ ಅಭ್ಯರ್ಥಿಗಳು ಪಡೆದ ಎಲ್ಲ ಮತಗಳೂ ಬಿಜೆಪಿ ಮತಗಳೇ. ಪ್ರತಿ ಕ್ಷೇತ್ರದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಮತಗಳು ಇರುವ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಮತ ನಷ್ಟವಾದರೂ ಅದರ ಪರಿಣಾಮ ಗಂಭೀರವಾಗುತ್ತದೆ.

ಬಂಡಾಯ ಸಮಸ್ಯೆ ಜತೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಒಂದು ಬಣ, ಠಾಕೂರ್ ನೇತೃತ್ವದ ಇನ್ನೊಂದು ಬಣ ಹಾಗೂ ಸಿಎಂ ಜೈರಾಂ ಠಾಕೂರ್ ನೇತೃತ್ವದ ಮೂರನೇ ಬಣ ಹೀಗೆ ಪಕ್ಷದ ಮುಖಂಡರಲ್ಲೇ ಆಂತರಿಕ ಬಣ ರಾಜಕೀಯ ಕೂಡಾ ಬಿಜೆಪಿಗೆ ಮುಳುವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ ಎಂದು ndtv.com ವರದಿ ಮಾಡಿದೆ.

Similar News