NJAC ಮಸೂದೆ ಮರು ಮಂಡನೆ ಪ್ರಸ್ತಾವ ಇಲ್ಲ: ಕೇಂದ್ರ ಸಚಿವ ಕಿರಣ್ ರಿಜಿಜು

Update: 2022-12-09 02:39 GMT

ಹೊಸದಿಲ್ಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (National Judicial Appointments Commission - NJAC) ಮಸೂದೆ ಮರು ಮಂಡನೆಯ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Union Minister of Law Kiren Rijiju) ರಾಜ್ಯಸಭೆಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ವಿಷಯ ಲೋಕಸಭೆಯಲ್ಲೂ ಪ್ರಸ್ತಾವವಾಗಿ, ಕೇಂದ್ರ ಸರ್ಕಾರ ಕೊಲಾಜಿಯಂ ವ್ಯವಸ್ಥೆಯನ್ನು ನಾಶಪಡಿಸಲು ಹುನ್ನಾರ ನಡೆಸಿದೆ ಎಂದು ಟಿಎಂಸಿ ಸದಸ್ಯರೊಬ್ಬರು ಆಪಾದಿಸಿದರು. ನ್ಯಾಯಾಂಗ ಸೇರಿದಂತೆ ಎಲ್ಲೆಡೆ ತನ್ನ ಅಧಿಕಾರವನ್ನು ಚಲಾಯಿಸಲು ಮುಂದಾಗಿದೆ ಎಂಬ ಗಂಭೀರ ಆರೋಪ ಮಾಡಿದರು.

ಎಜೆಎಸಿ ಕಾಯ್ದೆಯನ್ನು ಅನೂರ್ಜಿತಗೊಳಿಸಿದ ಸುಪ್ರೀಂಕೋರ್ಟ್ ಕ್ರಮವನ್ನು ರಾಜ್ಯಸಭಾಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಟೀಕಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಹೇಳಿಕೆ ನೀಡಿದೆ. ಸುಪ್ರೀಂಕೋರ್ಟ್, ದೇಶದ ಸಂಸತ್ತಿನ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಆಪಾದಿಸಿದ್ದರು.

ಸೂಕ್ತ ಮಾರ್ಪಾಡಿನೊಂದಿಗೆ ಎನ್‍ಜೆಎಸಿ ಮಸೂದೆಯನ್ನು ಮರು ಮಂಡಿಸಲು ಸರ್ಕಾರ ಉದ್ದೇಶಿಸಿದೆಯೇ ಎಂದು ಖರ್ಗೆ ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್ ಕೊಲಾಜಿಯಂ ಮಾಡಿದ ಶಿಫಾರಸ್ಸಿನಂತೆ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಸರ್ಕಾರ ತಡೆ ಒಡ್ಡಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ವಿಶೇಷ ಮಹತ್ವ ಪಡೆದಿತ್ತು ಎಂದು  ಎಂದು ndtv.com ವರದಿ ಮಾಡಿದೆ.

Similar News