ಹೊಸ ಸಿಎಂ ಆಯ್ಕೆಗೆ ಇಂದು ಹಿಮಾಚಲ ಕಾಂಗ್ರೆಸ್ ಶಾಸಕರ ಸಭೆ : ರಾಜೇಶ್ ಶುಕ್ಲಾ

Update: 2022-12-09 03:00 GMT

ಶಿಮ್ಲಾ: ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಹಿಮಾಚಲ ವಿಜಯ ದೊಡ್ಡ ಶಕ್ತಿ ನೀಡಿದ್ದು, ಎಚ್ಚರಿಕೆಯ ನಡೆ ಇಟ್ಟಿರುವ ಕಾಂಗ್ರೆಸ್ ಪಕ್ಷ ಮುಂದಿನ ಮುಖ್ಯಮಂತ್ರಿಯ ಆಯ್ಕೆ ಬಗ್ಗೆ ಚರ್ಚಿಸಲು ಇಂದು ಪಕ್ಷದ ಎಲ್ಲ ಶಾಸಕರ ಸಭೆ ಕರೆದಿದೆ ಎಂದು ndtv.com ವರದಿ ಮಾಡಿದೆ.

ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ಎಲ್ಲ ಶಾಸಕರನ್ನು ಚಂಡೀಗಢಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತ್ತು. ಆದರೆ ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತ ಪಡೆದ ಬಳಿಕ ತನ್ನ ಯೋಜನೆಯನ್ನು ಬದಲಿಸಿತ್ತು.

"ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಶಿಮ್ಲಾದಲ್ಲಿ ಶುಕ್ರವಾರ ಸಭೆ ಸೇರಲಿದ್ದು, ಈ ಸಭೆಯಲ್ಲಿ ಶಾಸಕಾಂಗ ಪಕ್ಷದ ಹೊಸ ನಾಯಕನನ್ನು ಆಯ್ಕೆ ಮಾಡಲಾಗುವುದು" ಎಂದು ಹಿಮಾಚಲ ಪ್ರದೇಶ ಉಸ್ತುವಾರಿ ಹೊಂದಿರುವ ರಾಜೇಶ್ ಶುಕ್ಲಾ ಹೇಳಿದ್ದಾರೆ.

ಪಕ್ಷ ಇಬ್ಬರು ವೀಕ್ಷಕರಾಗಿ ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಹಿರಿಯ ಮುಖಂಡ ಭೂಪೀಂದರ್ ಹೂಡಾ ಅವರನ್ನೂ ಕಳುಹಿಸುತ್ತಿದೆ. ಪಕ್ಷದ ಸಭೆ ನಡೆಯುವ ಶಿಮ್ಲಾಗೆ ನಾವೆಲ್ಲರೂ ತೆರಳಲಿದ್ದೇವೆ ಎಂದು ಪಿಟಿಐ ಜತೆ ಮಾತನಾಡಿದ ಅವರು ವಿವರಿಸಿದರು.

ವಿಧಾನಸಭೆಯ 68 ಸ್ಥಾನಗಳ ಪೈಕಿ 40 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು. ಬಿಜೆಪಿ ಕೇವಲ 25 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು, ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸೋಲೊಪ್ಪಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

Similar News