ರಾಜಸ್ಥಾನ: ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ, 4 ಮಂದಿ ಮೃತ್ಯು

Update: 2022-12-09 05:05 GMT

ಜೈಪುರ: ರಾಜಸ್ಥಾನದ ಜೋಧ್‌ಪುರ ಬಳಿ ಗುರುವಾರ ಮದುವೆ ಮನೆಯಲ್ಲಿ  ಎರಡು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ.

 ಮದುವೆಯ ಊಟವನ್ನು ಸಿದ್ಧಪಡಿಸುತ್ತಿದ್ದಾಗ  ಗ್ಯಾಸ್ ಸಿಲಿಂಡರ್‌ಗಳಲ್ಲಿ ಸೋರಿಕೆಯಾಗಿ ಪ್ರಬಲ ಸ್ಫೋಟಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ರಭಸಕ್ಕೆ ಮದುವೆ ನಡೆಯುತ್ತಿದ್ದ ಮನೆಯ ಒಂದು ಭಾಗವೂ ಕುಸಿದು ಬಿದ್ದಿದೆ.

12 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಜೋಧಪುರದಿಂದ ಸುಮಾರು 60 ಕಿ.ಮೀ. ದೂರದಲ್ಲಿರುವ ಭುಂಗ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

"ಇದು ತುಂಬಾ ಗಂಭೀರವಾದ ಘಟನೆ. 60 ಗಾಯಾಳುಗಳ ಪೈಕಿ 42 ಜನರನ್ನು ಎಂಜಿಹೆಚ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಚಿಕಿತ್ಸೆ ನಡೆಯುತ್ತಿದೆ" ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇಂದು ಸಂಜೆ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

Similar News