ಗುಜರಾತ್ ಚುನಾವಣೆ: ನೋಟಾ ಚಲಾವಣೆಯಲ್ಲಿ ಶೇ. 9ರಷ್ಟು ಕುಸಿತ

Update: 2022-12-09 06:55 GMT

ಹೊಸ ದಿಲ್ಲಿ: 2017ರ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ನೋಟಾ (NOTA) (ಯಾರಿಗೂ ಮತವಿಲ್ಲ) ಚಲಾವಣೆಯಲ್ಲಿ ಶೇ. 9ರಷ್ಟು ಕುಸಿತ ಕಂಡಿದ್ದು, ಈ ಬಾರಿ ಖೇದ್ ಬ್ರಹ್ಮ ಕ್ಷೇತ್ರದಲ್ಲಿ ಮಾತ್ರ ಗರಿಷ್ಠ 7331 ನೋಟಾ ಮತ ಚಲಾವಣೆಯಾಗಿದೆ.

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಈ ಬಾರಿ ರಾಜ್ಯದಲ್ಲಿ ನಡೆದಿರುವ ಚುನಾವಣೆಯಲ್ಲಿ 5,01,202 ನೋಟಾ ಚಲಾವಣೆಯಾಗಿದ್ದು, ಇದು ಒಟ್ಟಾರೆ ಮತದಾನದ ಶೇ. 1.5ರಷ್ಟಿದೆ. 2017ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಮಾಣ 5,51,594ರಷ್ಟಿತ್ತು.

ಖೇದ್ ಬ್ರಹ್ಮ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 7331 ನೋಟಾ ಮತ ಚಲಾವಣೆಯಾಗಿದ್ದು, ನಂತರದ ಸ್ಥಾನದಲ್ಲಿ ಡಾಂಟಾ (5231) ಹಾಗೂ ಛೋಟಾ ಉದಯ್ ಪುರ್ (5093) ವಿಧಾನಸಭಾ ಕ್ಷೇತ್ರಗಳಿವೆ.

ಉಳಿದಂತೆ ದೇವಗಢ್ ಬಾರಿಯಾ ಕ್ಷೇತ್ರದಲ್ಲಿ 4821, ಶೆಹ್ರಾ ಕ್ಷೇತ್ರದಲ್ಲಿ 4708, ನಿಜಾರ್ ಕ್ಷೇತ್ರದಲ್ಲಿ 4465, ಬಾರ್ದೋಲಿ 4211, ದಾಸ್ಕ್ರೋಯ್ ನಲ್ಲಿ 4189, ಧರ್ಮಪುರ್ ಕ್ಷೇತ್ರದಲ್ಲಿ 4189, ಚೋರ್ಯಾಸಿ ಕ್ಷೇತ್ರದಲ್ಲಿ 4169, ಸಂಕೇಢ ಕ್ಷೇತ್ರದಲ್ಲಿ 4143, ವಡೋದರಾ ನಗರ ಕ್ಷೇತ್ರದಲ್ಲಿ 4022 ಹಾಗೂ ಕಪ್ರಡಾ ಕ್ಷೇತ್ರದಲ್ಲಿ 4020 ನೋಟಾ ಮತಗಳು ಚಲಾವಣೆಯಾಗಿವೆ.

Similar News