ಎನ್‌ಡಿಟಿವಿಯ 5.46 ಲಕ್ಷ ಷೇರುಗಳನ್ನು ಮಾರಾಟ ಮಾಡಿದ ಮಾರಿಷಸ್‌ ಮೂಲದ ಎಲ್‌ಟಿಎಸ್‌ ಸಂಸ್ಥೆ

Update: 2022-12-09 07:26 GMT

ಹೊಸದಿಲ್ಲಿ : ಎನ್‌ಡಿಟಿವಿಯಲ್ಲಿ (NDTV) ಹೂಡಿಕೆ ಮಾಡಿದ್ದ ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರ ಸಂಸ್ಥೆ ಎಲ್‌ಟಿಎಸ್‌ (LTS) ಇನ್ವೆಸ್ಟ್‌ಮೆಂಟ್‌ ಫಂಡ್‌ ಲಿಮಿಟೆಡ್‌ ಬುಧವಾರ  ತನ್ನ ಬಳಿಯಿದ್ದ ಎನ್‌ಡಿಟಿವಿ ಯ 5,46 ಲಕ್ಷಕ್ಕೂ ಅಧಿಕ ಷೇರುಗಳನ್ನು ಮಾರಾಟ ಮಾಡಿದೆ. ಈ ಕಂಪೆನಿಯ ಬಳಿ ಎನ್‌ಡಿಟಿವಿಯ ಶೇ 9.75 ರಷ್ಟು ಷೇರುಗಳಿದ್ದವು. ಕಂಪೆನಿ ತಲಾ ಷೇರಿಗೆ ರೂ 358.53 ರಂತೆ ಮಾರಾಟ ಮಾಡಿದೆ ಎಂದು ವರದಿಯಾಗಿದೆ.

ಕಂಪೆನಿ ಬುಧವಾರ ಎನ್‌ಡಿಟಿವಿಯ ಶೇ 9.75 ರಷ್ಟ ಷೇರುಗಳಲ್ಲಿ ಶೇ 0.84 ರಷ್ಟು ಮಾರಾಟ ಮಾಡಿದ್ದು ಸದ್ಯ ಸಂಸ್ಥೆಯ ಬಳಿ ಇರುವ ಎನ್‌ಡಿಟಿವಿ ಷೇರುಗಳ ಪ್ರಮಾಣ ಶೇ 8.9 ಗೆ ಇಳಿಕೆಯಾಗಿದೆ.

ಮಾರಿಷಸ್‌ ಮೂಲದ ಈ ಎಲ್‌ಟಿಎಸ್‌  ಸಂಸ್ಥೆ 2016 ರಲ್ಲಿ ಎನ್‌ಡಿಟಿವಿಯ ಷೇರುಗಳನ್ನು  ಖರೀದಿಸಿತ್ತು. ಎನ್‌ಡಿಟಿವಿಯ ಸ್ಥಾಪಕರಾದ ರಾಧಿಕಾ ರಾಯ್‌ ಮತ್ತು ಪ್ರಣಯ್‌ ರಾಯ್‌ ಮತ್ತವರ ಪ್ರವರ್ತಕ ಸಂಸ್ಥೆ ಆರ್‌ಆರ್‌ಪಿಆರ್‌ಎಚ್‌ ಅವರ ನಂತರ ಗರಿಷ್ಠ ಷೇರುಗಳನ್ನು ಹೊಂದಿದ್ದ ಸಂಸ್ಥೆ ಇದಾಗಿತ್ತು.

ಎಲ್‌ಟಿಎಸ್‌ ಸಂಸ್ಥೆಯು ಭಾರತದಲ್ಲಿ ಮಾಡಿರುವ ಶೇ 98 ರಷ್ಟು ಹೂಡಿಕೆಗಳು ಅದಾನಿ ಸಮೂಹದ ನಾಲ್ಕು ಕಂಪೆನಿಗಳಲ್ಲಾಗಿದೆ.

ಎನ್‌ಡಿಟಿವಿಯ ಷೇರುದಾರರಿಗೆ ಅದಾನಿ ಸಮೂಹದ ಓಪನ್‌ ಆಫರ್‌ ಸೋಮವಾರ  ಮುಕ್ತಾಯಗೊಂಡಿದ್ದು ಕಂಪೆನಿಯ ಒಟ್ಟು ಷೇರುಗಳ ಪೈಕಿ ಶೇ 8.26 ರಷ್ಟು ಅದಾನಿ ಸಂಸ್ಥೆಗೆ ದೊರಕಿದೆ. ಇದರೊಂದಿಗೆ ಆರ್‌ಆರ್‌ಪಿಆರ್‌ಎಚ್‌ ಷೇರುಗಳು ವಿಸಿಪಿಎಲ್‌ಗೆ ವರ್ಗಾವಣೆಗೊಂಡಿರುವುದರಿಂದ ಅದಾನಿ ಸಮೂಹದ ಬಳಿ ಈಗ ಎನ್‌ಡಿಟಿವಿಯ ಬಹುಪಾಲು ಷೇರುಗಳು ಅಂದರೆ ಶೇ 37ರಷ್ಟು ಷೇರುಗಳಿವೆ.

ಎನ್‌ಡಿಟಿವಿಯ ಇನ್ನೊಂದು ಪ್ರಮುಖ ಷೇರುದಾರ ಸಂಸ್ಥೆ ಮಾರಿಷಸ್‌ ಮೂಲದ ವಿಕಾಸ ಇಂಡಿಯಾ ಇಐಎಫ್‌ ಐ ಫಂಡ್‌ ಆಗಿದ್ದು ಇದು ಎನ್‌ಡಿಟಿವಿಯಶೇ 4.42 ಷೇರುಗಳನ್ನು ಹೊಂದಿದ್ದು ಈ ಕಂಪೆನಿ ಕೂಡ ದೊಡ್‌ ಪ್ರಮಾಣದಲ್ಲಿ ಷೇರುಗಳನ್ನು ಕಳೆದ ಕೆಲ ದಿನಗಳಲ್ಲಿ ಮಾರಾಟ ಮಾಡಿದೆ.

Similar News