ಗುಜರಾತ್ ಚುನಾವಣೆ: 31 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವಿಗೆ ತೊಡಕಾದ ಆಮ್ ಆದ್ಮಿ ಪಕ್ಷ

ಬಿಜೆಪಿಗೆ 5 ಸ್ಥಾನ ನಷ್ಟ

Update: 2022-12-09 08:25 GMT

ಅಹಮದಾಬಾದ್: ಗುಜರಾತಿನ ರಾಜಕೀಯ ಕಣದಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ  ಆಮ್ ಆದ್ಮಿ ಪಕ್ಷ ಇಳಿದ ತಕ್ಷಣ ಅದು  ಯಾರ ಅದೃಷ್ಟಕ್ಕೆ ಮುಳುವಾಗಬಹುದು  ಎಂಬ ವಿಚಾರ ಫಲಿತಾಂಶದ ದಿನ ಹೊರಬಂದಿದೆ.

ನಿಕಟ ಸ್ಪರ್ಧೆಗಳ ವಿಶ್ಲೇಷಣೆಯಲ್ಲಿ   37 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ ಫಲಿತಾಂಶದ ಮೇಲೆ ಪರಿಣಾಮ ಬೀರಿರುವುದು ಬಹಿರಂಗವಾಗಿದೆ. ಕಾಂಗ್ರೆಸ್‌ನ 31 ಅಭ್ಯರ್ಥಿಗಳು ಹಾಗೂ  ಬಿಜೆಪಿಯ ಐದು ಅಭ್ಯರ್ಥಿಗಳು ಎಎಪಿ ಅಭ್ಯರ್ಥಿ ಪಡೆದ ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋತಿದ್ದಾರೆ.

ಟಂಕರಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭಾರೀ ನಿರಾಸೆ ಉಂಟಾಗಿದೆ.  ಅಲ್ಲಿ ಪಕ್ಷದ ಪ್ರಬಲ ಅಭ್ಯರ್ಥಿ ಲಲಿತ್ ಕಗಾತ್ರ (73,018 ಮತಗಳು) ಬಿಜೆಪಿಯ ದುರ್ಲಬ್ ಡೆಟಾರಿಯಾ (83,274 ಮತಗಳು) ವಿರುದ್ಧ 10,256 ಮತಗಳ ಅಂತರದಿಂದ ಸೋತಿದ್ದಾರೆ. ಎಎಪಿ ಅಭ್ಯರ್ಥಿ ಸಂಜಯ್ ಭಟಸಾನ 17,834 ಮತಗಳನ್ನು ಪಡೆದಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಗತ್ರ 29,770 ಮತಗಳಿಂದ ಗೆದ್ದಿದ್ದರು. ಭಟಸಾನ ಇಲ್ಲಿ ಕಾಂಗ್ರೆಸ್‌ನ ಗೆಲುವನ್ನು  ಕಸಿದರು ಎಂದು ನಂಬಲಾಗಿದೆ.

ಮಾನವದಾರ್‌ನಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಜವಾಹರ್ ಚಾವ್ಡಾ (61,237 ಮತಗಳು) ಕಾಂಗ್ರೆಸ್‌ನ ಅರವಿಂದ ಲಡಾನಿ (64,693 ಮತಗಳು) ವಿರುದ್ಧ 3,453 ಮತಗಳ ಅಂತರದಿಂದ ಸೋತರು. ಎಎಪಿ ಅಭ್ಯರ್ಥಿ ಕರ್ಸನ್ ಭದರ್ಕಾ ಇಲ್ಲಿ 23,297 ಮತಗಳನ್ನು ಪಡೆಯುವ ಮೂಲಕ ಚಾವ್ಡಾ ಅವರ ಅವಕಾಶವನ್ನು ಕಸಿದರು. ಚಾವ್ಡಾ ಅವರು 2017 ರಲ್ಲಿ 29,763 ಮತಗಳಿಂದ ಈ ಸ್ಥಾನವನ್ನು ಗೆದ್ದಿದ್ದರು.

ಜಸ್ದಾನ್‌ನಲ್ಲಿ ಕಾಂಗ್ರೆಸ್‌ನ ಭೋಲಾ ಗೋಹಿಲ್ (45,795 ಮತಗಳು) ಹಾಲಿ ಬಿಜೆಪಿ ಸಚಿವ ಕುನ್ವರ್ಜಿ ಬವಲಿಯಾ (63,808 ಮತಗಳು) ವಿರುದ್ಧ 16,172 ಮತಗಳಿಂದ ಸೋತರೆ, ಎಎಪಿಯ ತೇಜಸ್ ಗಾಜಿಪಾರಾ 47,636 ಮತಗಳನ್ನು ಪಡೆದರು. ಬವಾಲಿಯಾ 2017ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 9,277 ಮತಗಳಿಂದ ಗೆದ್ದಿದ್ದರು.

ಭಿಲೋಡಾದಲ್ಲಿ ಬಿಜೆಪಿಯ ಪಿ.ಸಿ. ಬರಂಡ 89,626 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ರಾಜೇಂದ್ರ ಪರ್ಘಿ 42,351 ಮತಗಳನ್ನು ಪಡೆದಿದ್ದಾರೆ. ಎಎಪಿಯ ರೂಪ್ಸಿ ಭಗೋರಾ 60,148 ಮತಗಳನ್ನು ಪಡೆದಿದ್ದರಿಂದ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನ ಈ ಸ್ಥಾನವು ಬಿಜೆಪಿಗೆ ಹೋಯಿತು.

ಅಂತೆಯೇ, ಮೋಹನ್ ಕೊಂಕಣಿ 69,024 ಮತಗಳನ್ನು ಗೆದ್ದ ನಂತರ ಕಾಂಗ್ರೆಸ್ ಹಿಡಿತದಲ್ಲಿರುವ ವ್ಯಾರಾ ಸ್ಥಾನವು ಬಿಜೆಪಿ ಪಾಲಾಯಿತು. ಕಾಂಗ್ರೆಸ್‌ನ ಪುನಭಾಯ್ ಗಮಿತ್ 45,224 ಮತಗಳಿಗೆ ಸೀಮಿತಗೊಂಡರು. ಎಎಪಿಯ ಬಿಪಿನ್‌ಚಂದ್ರ ಚೌಧರಿ 46,264 ಮತಗಳನ್ನು ಪಡೆದು ರನ್ನರ್‌ ಅಪ್‌ ಆಗಿದ್ದರು.

ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ ರಾಜ್‌ಕೋಟ್ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಂದ್ರನೀಲ್ ರಾಜ್‌ಗುರು (57,599 ಮತಗಳು) ಬಿಜೆಪಿಯ ಉದಯ್ ಕಾಂಗಡ್ (86,194) ವಿರುದ್ಧ 28,635 ಮತಗಳಿಂದ ಸೋತಿದ್ದಾರೆ. ಎಎಪಿ ಅಭ್ಯರ್ಥಿ ರಾಹುಲ್ ಭುವಾ 35,436 ಮತಗಳನ್ನು ಪಡೆದು ರಾಜಗುರು ಅವರ ಅವಕಾಶವನ್ನು ಉಲ್ಟಾ ಮಾಡಿದ್ದಾರೆ.

Similar News