ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸುವಂತೆ ಸೂಚಿಸಿದ ಕೋರ್ಟ್

Update: 2022-12-09 09:57 GMT

ಹೊಸದಿಲ್ಲಿ: ತಮ್ಮ ಸ್ಥಾನಗಳನ್ನು ದುರ್ಬಳಕೆ ಮಾಡಿಕೊಂಡು ದಿಲ್ಲಿ ಮಹಿಳಾ ಆಯೋಗದ ವಿವಿಧ ಸ್ಥಾನಗಳಿಗೆ ಆಪ್ ಕಾರ್ಯಕರ್ತರನ್ನು ನೇಮಿಸಿರುವ ಆರೋಪ ಎದುರಿಸುತ್ತಿರುವ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಮತ್ತಿತರ ವಿರುದ್ಧ ಭ್ರಷ್ಟಾಚಾರ ಮತ್ತು ಪಿತೂರಿ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ದಿಲ್ಲಿ ಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಅಲ್ಲದೆ ದೆಹಲಿ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಪ್ರೊಮಿಳಾ ಗುಪ್ತಾ, ಸಾರಿಕಾ ಚೌಧರಿ ಮತ್ತು ಫರ್ಹೀನ್ ಮಲಿಕ್ ಅವರನ್ನು ವಿಚಾರಣೆಗೊಳಪಡಿಸುವಂತೆಯೂ ನಿರ್ದೇಶಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ದಿಗ್ ವಿನಯ್ ಸಿಂಗ್ ಅವರು, "ದಿಲ್ಲಿ ಮಹಿಳಾ ಆಯೋಗದಿಂದ ಹಲವು ದಿನಾಂಕಗಳಂದು ನಡೆದಿರುವ ಸಭೆಗಳಲ್ಲಿ ಕೈಗೊಂಡಿರುವ ನಿರ್ಣಯಗಳಿಗೆ ಆರೋಪಿಗಳು ಸಹಿ ಮಾಡಿದ್ದಾರೆ. ಹೀಗಾಗಿ ಪ್ರಶ್ನೆಗೊಳಗಾಗಿದ್ದ ನೇಮಕಾತಿಗಳನ್ನು ಎಲ್ಲ ನಾಲ್ವರೂ ಪರಸ್ಪರ ಒಪ್ಪಂದದ ಮೂಲಕ ನಡೆಸಿರುವ ಅನುಮಾನಕ್ಕೆ ಕಾರಣವಾಗಿದ್ದು, ಇದು ಮೇಲ್ನೋಟದ ಅಪರಾಧವಾಗಿದೆ” ಎಂದು ಅಭಿಪ್ರಾಯ ಪಟ್ಟರು.

 “ಮಲಿವಾಲ್ ಅಲ್ಲದೆ ಇತರ ಮೂವರು ಆರೋಪಿಗಳೂ ಕಾನೂನು ಬಾಹಿರ ನೇಮಕಾತಿ ಪ್ರಕ್ರಿಯೆನ್ನು ಆಕ್ಷೇಪಿಸುವುದಾಗಲಿ ಅಥವಾ ಅದಕ್ಕೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸುವುದಾಗಲಿ ಮಾಡಿಲ್ಲ. ಬದಲಿಗೆ ಆ ಸಭೆಗಳಲ್ಲಿ ಈ ನಿರ್ಣಯಕ್ಕೆ ಅವಿರೋಧವಾಗಿ ಬರಲಾಗಿದೆ ಎಂದು ಹೇಳಲಾಗಿದೆ” ಎಂದು ಹೇಳಿದ್ದಾರೆ.

 “ಮೇಲ್ನೋಟದ ಅಪರಾಧ ಸನ್ನಿವೇಶಗಳು ಆರೋಪಿಗಳು ಪರಸ್ಪರ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಬಲವಾಗಿ ಸೂಚಿಸುತ್ತವೆ.  ನಾಲ್ವರ ವಿರುದ್ಧ ಈ ಅಪರಾಧಕ್ಕಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು” ಎಂದು ಅವರು ಪೊಲೀಸರಿಗೆ ಸೂಚಿಸಿದ್ದಾರೆ.

ನ್ಯಾಯಾಲಯದ ಆದೇಶದನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120-ಬಿ (ಪಿತೂರಿ) ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 13(1)(ಡಿ) (ಸಾರ್ವಜನಿಕ ಸೇವಕರ ದುರ್ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಾಗಲಿದೆ. ಮಾಜಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಮತ್ತು ಬಿಜೆಪಿ ಶಾಸಕಿ ಬರ್ಖಾ ಶುಕ್ಲಾ ಸಿಂಗ್ ಅವರ ದೂರನ್ನು ಆಧರಿಸಿ ಭ್ರಷ್ಟಾಚಾರ ನಿಗ್ರಹ ದಳವು ಪ್ರಕರಣ ದಾಖಲಿಸಿಕೊಂಡಿತ್ತು.

Similar News