'ಕ್ರೂರತನದಿಂದ ವರ್ತಿಸಿಲ್ಲ': ಕೊಲೆ ಆರೋಪಿಯ ಜೀವಾವಧಿ ಶಿಕ್ಷೆ ಕಡಿತಗೊಳಿಸಿದ ಬಾಂಬೆ ಹೈಕೋರ್ಟ್

Update: 2022-12-09 11:52 GMT

ಮುಂಬೈ: ಮಾಂಸವನ್ನು ಸರಿಯಾಗಿ ಬೇಯಿಸಿಲ್ಲ ಎಂಬ ಕಾರಣಕ್ಕೆ ತನ್ನ ಪತ್ನಿಯನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆರೋಪಿಯೋರ್ವನ ಶಿಕ್ಷೆಯ ಪ್ರಮಾಣವನ್ನು ಬಾಂಬೆ ಹೈಕೋರ್ಟ್ ಕಡಿತಗೊಳಿಸಿದೆ ಎಂದು ವರದಿಯಾಗಿದೆ.

ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾ. ರೋಹಿತ್ ಡಿಯೊ ಹಾಗೂ ಊರ್ಮಿಳಾ ಜೋಷಿ ಫಾಲ್ಕೆ ಅವರನ್ನೊಳಗೊಂಡಿದ್ದ ವಿಭಾಗೀಯ ಪೀಠವು, ಆರೋಪಿಯ ದೋಷವನ್ನು ಎತ್ತಿ ಹಿಡಿದಿದ್ದು, ಆರೋಪಿಯ ಅಪರಾಧವು ಐಪಿಸಿ ಸೆಕ್ಷನ್ 302(ಕೊಲೆ)ರ ಬದಲು ಐಪಿಸಿ ಸೆಕ್ಷನ್ 304ರ ಭಾಗ-1 (ಹತ್ಯೆ) ಅಡಿ ಬರಲಿದೆ ಎಂದು ಅಭಿಪ್ರಾಯ ಪಟ್ಟಿದೆ. ಈ ಸೆಕ್ಷನ್ ಅನುಸಾರ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಒಂದು ವೇಳೆ ಪ್ರಕರಣವು ಐಪಿಸಿ ಸೆಕ್ಷನ್ 302ರ ವ್ಯಾಪ್ತಿಗೆ ಒಳಪಡುತ್ತದೆಯೇ ಎಂಬುದರ ಕುರಿತು ಪರಿಶೀಲಿಸಿದ ನ್ಯಾಯಪೀಠವು, ಉದ್ದೇಶದ ಸ್ವರೂಪವನ್ನು ನಿರ್ಧರಿಸುವಾಗ ಯಾವ ಬಗೆಯ ಆಯುಧವನ್ನು ಬಳಸಲಾಗಿದೆ ಎಂಬುದನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿತು.

ಹತ್ಯೆ ನಡೆದ ಸಂದರ್ಭಕ್ಕೂ ಮುನ್ನವೇ ಆರೋಪಿಯು ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಲು ಸಿದ್ಧವಾಗಿರಲಿಲ್ಲ ಮತ್ತು ಜಗಳವಾದಾಗ ಕೋಲಿನಂಥ ಮಾರಕವಲ್ಲದ ಆಯುಧವನ್ನು ಬಳಸಿದ್ದ ಎಂಬ ಅಂಶವನ್ನೂ ನ್ಯಾಯಪೀಠ ಪರಿಗಣಿಸಿತು.

“ಮೇಲ್ಮನವಿದಾರನಿಗೆ ಹತ್ಯೆಗೀಡಾದ ಮಹಿಳೆಯು ಗಾಯಗಳಿಂದ ಸಾವಿಗೀಡಾಗಬಹುದು ಎಂಬ ಸಂಗತಿ ತಿಳಿದಿತ್ತು. ಉದ್ದೇಶದ ಸ್ವರೂಪವನ್ನು ಗಣನೆಗೆ ತೆಗೆದುಕೊಂಡಾಗ ಆರೋಪಿಗೆ ತನ್ನ ಪತ್ನಿಯನ್ನು ಗಾಯಗೊಳಿಸುವ ಉದ್ದೇಶವಿದ್ದದ್ದು ನಿಜ. ಹೀಗಿದ್ದೂ ಆರೋಪಿಯು ಹಲ್ಲೆಯ ಸಂದರ್ಭದಲ್ಲಿ ಯಾವುದೇ ದುರ್ಲಾಭವನ್ನಾಗಲಿ, ಕ್ರೂರ ಅಥವಾ ಅಸಹಜ ರೀತಿಯಲ್ಲಾಗಲಿ ವರ್ತಿಸಿಲ್ಲದಿರುವುದು ಕಂಡು ಬರುತ್ತದೆ” ಎಂದು ನ್ಯಾಯಪೀಠವು ಅಭಿಪ್ರಾಯ ಪಟ್ಟಿತು ಎಂದು news18.com ವರದಿ ಮಾಡಿದೆ.

ಹೀಗಾಗಿ ಐಪಿಸಿ ಸೆಕ್ಷನ್ 300ರ ಭಾಗ 4ರಿಂದ ಆರೋಪಿಗೆ ವಿನಾಯಿತಿ ನೀಡಿರುವ ನ್ಯಾಯಪೀಠವು, ಐಪಿಸಿ ಸೆಕ್ಷನ್ 304ರ ಭಾಗ 1ರ ಅಡಿಯಲ್ಲಿ ಶಿಕ್ಷೆ ವಿಧಿಸಿದೆ.

Similar News