ಹಿಮಾಚಲ ಪ್ರದೇಶ: ಕಾಂಗ್ರೆಸ್ ನಾಯಕನ ಕಾರನ್ನು ಅಡ್ಡಗಟ್ಟಿದ ಸಿಎಂ ಹುದ್ದೆ ಆಕಾಂಕ್ಷಿ ಪ್ರತಿಭಾ ಸಿಂಗ್‌ ಬೆಂಬಲಿಗರು

Update: 2022-12-09 11:19 GMT

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಈಗ ಕಾಂಗ್ರೆಸ್‌ ಪಕ್ಷಕ್ಕೆ ಮುಖ್ಯಮಂತ್ರಿ ಆಯ್ಕೆಯ ತಲೆನೋವು ಆರಂಭಗೊಂಡಿದೆ. ಈ ಹುದ್ದೆಯ ಆಕಾಂಕ್ಷಿಗಳಲ್ಲಿ ಪ್ರಮುಖರಾಗಿರುವ ಪ್ರತಿಭಾ ಸಿಂಗ್‌ ಅವರ ಬೆಂಬಲಿಗರು ಇಂದು  ಶಿಮ್ಲಾದ ಒಬೆರಾಯ್‌ ಸಿಸಿಲ್‌ ಎದುರು ಜಮಾಯಿಸಿ ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಮುಖ್ಯಮಂತ್ರಿ ಆಯ್ಕೆಯ ಜವಾಬ್ದಾರಿ ವಹಿಸಿ ಪಕ್ಷದ ಕೇಂದ್ರ ನಾಯಕತ್ವ ಬಘೇಲ್‌ ಅವರನ್ನು ಹಿಮಾಚಲ ಪ್ರದೇಶಕ್ಕೆ ಕಳುಹಿಸಲಾಗಿದೆ.

ಪಕ್ಷ ಕಾರ್ಯಕರ್ತರು ಬಘೇಲ್‌ ಅವರ ಕಾರನ್ನು ಸುತ್ತುವರಿದು ಪ್ರತಿಭಾ ಪರ ಘೋಷಣೆಗಳನ್ನು ಕೂಗುತ್ತಿರುವುದು ವೀಡಿಯೋ ಒಂದರಲ್ಲಿ ಕಾಣಿಸುತ್ತದೆ. ಪ್ರತಿಭಾಸಿಂಗ್‌ ಅವರು ಸಂಸದೆಯಾಗಿದ್ದಾರೆ. ಆದರೆ ವಿಧಾನಸಭಾ ಚುನಾವಣೆ ಸ್ಪರ್ಧಿಸದೇ ಇರುವ ಅವರು ರಾಜ್ಯದಲ್ಲಿ ಪಕ್ಷದ ಪ್ರಚಾರಾಭಿಯಾನದ ಮುಂಚೂಣಿ ವಹಿಸಿದ್ದರು.

ಹಿಮಾಚಲ ಕಾಂಗ್ರೆಸ್‌ ಘಟಕದ ಅಧ್ಯಕ್ಷೆಯೂ ಆಗಿರುವ ಪ್ರತಿಭಾ ಇಂದು ಹಿರಿಯ ನಾಯಕರು ಹಾಗೂ ಶಾಸಕರ ಜೊತೆಗಿನ ಸಭೆಗೂ ಮುನ್ನ ಮಾತನಾಡಿ, "ಯಾವುದೇ ಗುಂಪುಗಾರಿಕೆ ಇಲ್ಲ, ಎಲ್ಲರೂ ನಮ್ಮೊಂದಿಗಿದ್ದಾರೆ,ʼʼ ಎಂದು ಹೇಳುವ ಮೂಲಕ ತಾವು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವುದರ ಸ್ಪಷ್ಟ ಸುಳಿವನ್ನು ನೀಡಿದ್ದಾರೆ. ಪ್ರತಿಭಾ ಅವರು ಕಳೆದ ವರ್ಷ ನಿಧನರಾದ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ವೀರಭದ್ರ ಸಿಂಗ್‌ ಅವರ ಪತ್ನಿ.

"ಸೋನಿಯಾಜಿ ಮತ್ತು ಹೈಕಮಾಂಡ್‌  ಚುನಾವಣೆ ಸಂದರ್ಭ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನನಗೆ ನೀಡಿದ್ದರಿಂದ ನಾನು ರಾಜ್ಯವನ್ನು ಮುಖ್ಯಮಂತ್ರಿಯಾಗಿ ಮುನ್ನಡೆಸಬಲ್ಲೆ ಎಂದು ಅನಿಸುತ್ತದೆ. ವೀರಭದ್ರ ಸಿಂಗ್‌ ಅವರ ಹೆಸರಿನಲ್ಲಿ ಚುನಾವಣೆಯನ್ನು ಸ್ಪರ್ಧಿಸಿ ಗೆದ್ದಿರುವುದರಿಂದ ಅವರ ಕುಟುಂಬವನ್ನು ಬದಿಗೆ ಸರಿಸುವುದು ಸರಿಯಾಗದು. ವೀರಭದ್ರ ಸಿಂಗ್‌ ಅವರೊಂದಿಗೆ ಇಲ್ಲಿನ ಜನರು ಭಾವನಾತ್ಮಕ ನಂಟು ಹೊಂದಿರುವುದರಿಂದ ನಾವು 40 ಸೀಟ್‌ ಗೆದ್ದೆವು,ʼʼ ಎಂದು ಅವರು ಹೇಳಿದರು.

Similar News