ಯೂಟ್ಯೂಬ್‌ ಅಶ್ಲೀಲ ಜಾಹಿರಾತುಗಳಿಂದ ಪರೀಕ್ಷೆಯಲ್ಲಿ ಅನುತ್ತಿರ್ಣನಾದೆ ಎಂದು ಸುಪ್ರೀಂ ಮೊರೆ ಹೋದ ಯುವಕ

75 ಲಕ್ಷ ಪರಿಹಾರ ಕೋರಿದ ಅರ್ಜಿಯನ್ನು ವಜಾಗೊಳಿಸಿ, 25 ಸಾವಿರ ದಂಡ ವಿಧಿಸಿದ ನ್ಯಾಯಾಲಯ

Update: 2022-12-09 13:58 GMT

ಹೊಸದಿಲ್ಲಿ: ಯೂಟ್ಯೂಬಿನಲ್ಲಿ (Youtube) ಬರುವ ಅಶ್ಲೀಲ ಜಾಹೀರಾತುಗಳು ತಾನು ಪರೀಕ್ಷೆಗೆ ತಯಾರುಗೊಳ್ಳುವಾಗ ಗಮನವನ್ನು ವಿಚಲಿತಗೊಳಿಸಿದೆ, ಹಾಗಾಗಿ ಯೂಟ್ಯೂಬ್‌ನಿಂದ 75 ಲಕ್ಷ ರೂಪಾಯಿ ಪರಿಹಾರ ದೊರಕಿಸಿ ಕೊಡಬೇಕೆಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ವ್ಯಕ್ತಿಯ ಅರ್ಜಿಯನ್ನು ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರ ಪೀಠವು ಅರ್ಜಿದಾರ ಆನಂದ್ ಕಿಶೋರ್ ಚೌಧರಿ ಅವರ ಅರ್ಜಿಯನ್ನು ಕಟುವಾಗಿ ಟೀಕಿಸಿದ್ದು, ಇಂತಹ ಅಸಂಬದ್ಧ ಅರ್ಜಿಗಳಿಂದ ನ್ಯಾಯಾಲಯದ ಸಮಯ ಹಾಳುಗೆಡವಿದಕ್ಕೆ ಅರ್ಜಿದಾರರಿಗೆಗೆ 25,000 ರೂ. ದಂಡ ವಿಧಿಸಿದೆ.

ಅರ್ಜಿದಾರರು ಜಾಹೀರಾತುಗಳನ್ನು ವೀಕ್ಷಿಸದೆ ಇರಬಹುದಿತ್ತು ಎಂದು ಹೇಳಿದ ನ್ಯಾಯಪೀಠವು, ಇಂತಹ ಅರ್ಜಿಗಳು ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುತ್ತವೆ ಎಂದುಹೇಳಿದೆ.

"ಇದು ನ್ಯಾಯಾಲಯಕ್ಕೆ ಅರ್ಜಿದಾರರು ಸಲ್ಲಿಸಿದ ಅತ್ಯಂತ ಕ್ರೂರ ಅರ್ಜಿಗಳಲ್ಲಿ ಒಂದಾಗಿದೆ. ಅವರು ಯೂಟ್ಯೂಬ್‌ಗೆ ನೋಟಿಸ್ ಮತ್ತು ಜಾಹೀರಾತುಗಳಲ್ಲಿನ ನಗ್ನತೆಯನ್ನು ನಿಷೇಧಿಸಬೇಕು ಮತ್ತು 75 ಲಕ್ಷ ರೂಪಾಯಿ ಪರಿಹಾರವನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಿಮಗೆ ಜಾಹೀರಾತು ಇಷ್ಟವಾಗದಿದ್ದರೆ, ಅದನ್ನು ವೀಕ್ಷಿಸಬೇಡಿ. ಅವರು ಜಾಹೀರಾತನ್ನು ಏಕೆ ವೀಕ್ಷಿಸಿದರು? ಇಂತಹ ಅರ್ಜಿಗಳು ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುತ್ತವೆ, ”ಎಂದು ಪೀಠ ಹೇಳಿದೆ.

ಗೂಗಲ್ ಒಡೆತನದ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಿಂದ 75 ಲಕ್ಷ ರೂಪಾಯಿ ಪರಿಹಾರವನ್ನು ಕೋರಿ ಆನಂದ್ ಕಿಶೋರ್ ಚೌಧರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಯೂಟ್ಯೂಬ್‌ ನಲ್ಲಿ ಬಂದ ಜಾಹೀರಾತುಗಳಲ್ಲಿನ ಲೈಂಗಿಕ ವಿಷಯಗಳಿಂದ ವಿಚಲಿತನಾಗಿದ್ದು, ಆದ್ದರಿಂದ ಮಧ್ಯಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ ಎಂದು ಅವರು ಆರೋಪಿಸಿದ್ದರು.

ಅರ್ಜಿದಾರರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಗ್ನತೆಯ ಮೇಲೆ ಸಂಪೂರ್ಣ ನಿಷೇಧವನ್ನು ಕೋರಿದ್ದರು. ಆರಂಭದಲ್ಲಿ, ಪೀಠವು ಅರ್ಜಿದಾರರ ಮೇಲೆ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸುತ್ತಿತ್ತು, ಈ ವೇಳೆ, ಅವರು ನ್ಯಾಯಾಲಯಕ್ಕೆ ಕ್ಷಮೆಯಾಚಿಸಿದ್ದು, ಅವರ ಪೋಷಕರು ಕಾರ್ಮಿಕರು ಎಂದು ಹೇಳಿಕೊಂಡಿದ್ದಾರೆ, ಅಲ್ಲದೆ, ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ಇದಕ್ಕೆ ನ್ಯಾಯಮೂರ್ತಿ ಕೌಲ್, “ನಿಮಗೆ ಪ್ರಚಾರ ಬೇಕಾದಾಗ ಈ ನ್ಯಾಯಾಲಯಕ್ಕೆ ಬರಬಹುದು ಎಂದು ನೀವು ಭಾವಿಸುತ್ತೀರಿ. ನಾನು ವೆಚ್ಚವನ್ನು ಕಡಿಮೆ ಮಾಡುತ್ತೇನೆ ಆದರೆ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದ್ದಾರೆ.

ನಂತರ ಪೀಠವು ವೆಚ್ಚವನ್ನು 25,000 ರೂ.ಗೆ ತಗ್ಗಿಸಿದ್ದು, ಸುಪ್ರೀಂ ಕೋರ್ಟ್ ನ ಮಧ್ಯಸ್ಥಿಕೆ ಕೇಂದ್ರದಲ್ಲಿ ಠೇವಣಿ ಮಾಡಲು ಸೂಚಿಸಿದೆ.

ಅರ್ಜಿದಾರರು ತಾನು ನಿರುದ್ಯೋಗಿ ಎಂದು ಪೀಠಕ್ಕೆ ತಿಳಿಸಿದ್ದು, "ನೀವು ನಿರುದ್ಯೋಗಿಗಳಾಗಿದ್ದರೂ, ನೀವು ಪಾವತಿಸದಿದ್ದರೆ ವಸೂಲಾತಿ ಮಾಡಲಾಗುತ್ತದೆ" ಎಂದು ನ್ಯಾಯಮೂರ್ತಿ ಕೌಲ್ ಹೇಳಿದ್ದಾರೆ.

Similar News