ವಿಪಕ್ಷಗಳ ವಿರೋಧದ ನಡುವೆ ಸಂಸದರ ಖಾಸಗಿ ವಿಧೇಯಕವಾಗಿ ಸಮಾನನಾಗರಿಕ ಸಂಹಿತೆ ರಾಜ್ಯಸಭೆಯಲ್ಲಿ ಮಂಡನೆ

Update: 2022-12-09 14:27 GMT

ಹೊಸದಿಲ್ಲಿ,ಡಿ.9: ಪ್ರತಿಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಬಿಜೆಪಿ (BJP)ಸಂಸದ ಕಿರೋಡಿಲಾಲ್ ಮೀನಾ(Kirodilal Meena) ಶುಕ್ರವಾರ ಭಾರತೀಯ ಸಮಾನನಾಗರಿಕ ಸಂಹಿತೆ ಕುರಿತ ಸಂಸದರ ಖಾಸಗಿ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಿದರು. ಧರ್ಮಾಧಾರಿತ ವೈಯಕ್ತಿಕ ಕಾನೂನುಗಳನ್ನು ರದ್ದುಗೊಳಿಸುವ ಉದ್ದೇಶವನ್ನು ಈ ವಿಧೇಯಕವು ಹೊಂದಿದೆ.

 ಈ ವಿಧೇಯಕವನ್ನು ವಿರೋಧಿಸಿ ಪ್ರತಿಪಕ್ಷಗಳು ಮೂರು ಗೊತ್ತುವಳಿಗಳನ್ನು ಮಂಡಿಸಿದವು. ಸಮಾನನಾಗರಿಕ ಸಂಹಿತೆಯು ದೇಶದ ವಿಘಟನೆಗೆ ಕಾರಣವಾಗುತ್ತದೆ ಹಾಗೂ ವೈವಿಧ್ಯಮಯ ಸಂಸ್ಕೃತಿಗೆ ಹಾನಿಯುಂಟು ಮಾಡುತ್ತದೆ ಎಂದು ಗೊತ್ತುವಳಿಯಲ್ಲಿ ಪ್ರತಿಪಾದಿಸಲಾಗಿತ್ತು. ಆದರೆ ಈ ಗೊತ್ತುವಳಿಯನ್ನು ಮತಕ್ಕೆ ಹಾಕಿದಾಗ, 63-23 ಮತಗಳಿಂದ ಪರಾಭವಗೊಂಡಿತು.

 ಖಾಸಗಿ ಸದಸ್ಯರ ವಿಧೇಯಕವನ್ನು ಕಾರ್ಯಾಂಗದ ಭಾಗವಾಗದೆ, ಸಂಸದರು ಸ್ವತಂತ್ರವಾಗಿ ಮಂಡಿಸುತ್ತಾರೆ. ಖಾಸಗಿ ವಿಧೇಯಕವನ್ನು ಸದನದಲ್ಲಿ ಅಂಗೀಕರಿಸುವುದರಿಂದ ಅದು ಶಾಸನವಾಗಿ ಜಾರಿಗೊಳ್ಳುವುದಿಲ್ಲವಾದರೂ, ಪ್ರಸ್ತಾವಿತ ವಿಧೇಯಕದ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ದೊರೆಯುತ್ತದೆ.

 ಸಂವಿಧಾನದ ನಿರ್ದೇಶನಾತ್ಮಕ ತತ್ವಗಳಡಿ ಈ ವಿಷಯವನ್ನು ಎತ್ತುವುದು ಸಂಸದರ ಕಾನೂನುಬದ್ಧ ಹಕ್ಕಾಗಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್(Piyush Goyal) ಅವರು ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ ವಿಧೇಯಕವನ್ನು ಬೆಂಬಲಿಸಿ ಹೇಳಿದರು. ‘‘ ಸಮಾನ ನಾಗರಿಕ ಸಂಹಿತೆ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕಿದೆ. ಈ ಹಂತದಲ್ಲಿ ಸರಕಾರದ ಮೇಲೆ ಯಾವುದೇ ಕಳಂಕ ಹೊರಿಸುವುದು, ವಿಧೇಯಕವನ್ನು ಟೀಕಿಸುವುದು ಅನುಚಿತವಾಗಿದೆ’’ ಎಂದವರು ಹೇಳಿದ್ದಾರೆ.

 ಆನಂತರ ರಾಜ್ಯಸಭಾ ಅಧ್ಯಕ್ಷ ಜಗದೀಪ್ ವಿಧೇಯಕವನ್ನು ಧ್ವನಿಮತಕ್ಕೆ ಹಾಕಿದಾಗ, 63 ಮಂದಿ ಪರ ಹಾಗೂ 23 ಮಂದಿ ವಿರೋಧ ವ್ಯಕ್ತಪಡಿಸಿದರು.

 ಸಾರ್ವಜನಿಕರ ಬದುಕಿನ ಮೇಲೆ ವ್ಯಾಪಕ ಪರಿಣಾಮವನ್ನು ಬೀರುವಂತಹ ಈ ವಿಧೇಯಕವನ್ನು ವಿವಿಧ ಸಮುದಾಯಗಳ ಜೊತೆ ಸಾರ್ವಜನಿಕವಾಗಿ ಸಮಾಲೋಚನೆ ನಡೆಸದೆಯೇ ಮಂಡಿಸಬಾರದೆಂದು ಪ್ರತಿಪಕ್ಷ ಸಂಸದರು ಸದನದಲ್ಲಿ ಆಗ್ರಹಿಸಿದರು.

 ವಿಧೇಯಕವನ್ನು ವಿರೋಧಿಸಿ ಸದನದಲ್ಲಿ ಮಾತನಾಡಿದ ಡಿಎಂಕೆಯ ತಿರುಚಿ ಶಿವಾ ಅವರು, ಇದು ಸಮಾನ ನಾಗರಿಕ ಸಂಹಿತೆಯು ಜಾತ್ಯತೀಯ ತತ್ವಕ್ಕೆ ವಿರುದ್ಧವಾಗಿದೆ ಎಂದರು. ಎಸ್ಪಿ ಸಂಸದ ಆರ್.ಜಿ. ವರ್ಮಾ(RG Verma) ಅವರು ಸಮಾನ ನಾಗರಿಕ ಸಂಹಿತೆ ಯು ಸಂವಿಧಾನದ ನಿಯಮಗಳಿಗೆ ವಿರುದ್ಧವಾದುದಾಗಿದೆ ಎಂದು ಟೀಕಿಸಿದರು.

ದೇಶದಲ್ಲಿ ಸಮಾನನಾಗರಿಕ ಸಂಹಿತೆ ಜಾರಿಗೊಳಿಸುವ ಬಗ್ಗೆ ಶೂನ್ಯವೇಳೆಯಲ್ಲಿ ಚರ್ಚಿಸಲು ಅವಕಾಶ ಕೋರಿ ಬಿಜೆಪಿ ಸಂಸದ ಹರನಾಥ್ ಸಿಂಗ್ (Harnath Singh)ನೋಟಿಸ್ ನೀಡಿದರು.

  ಸಮಾನ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ಹಾಗೂ ಭಾರತಾದ್ಯಂತ ಅದನ್ನು ಅದನ್ನು ಅನುಷ್ಠಾನಕ್ಕೆ ತರಲು ರಾಷ್ಟ್ರೀಯ ನಿರೀಕ್ಷಣಾ ಹಾಗೂ ತನಿಖಾ ಸಮಿತಿಯ ರಚನೆಗೆ ಈ ವಿಧೇಯಕವು ಅವಕಾಶ ನೀಡುತ್ತದೆ.

 ಗುಜರಾತ್‌ನಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುವುದೆಂದು ಬಿಜೆಪಿಯು ತನ್ನ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಗುಜರಾತ್‌ನಲ್ಲಿ ಬಿಜೆಪಿಯು ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿದ ಮರುದಿನವೇ ರಾಜ್ಯಸಭೆಯಲ್ಲಿ ಈ ವಿಧೇಯಕ ಮಂಡನೆಯಾಗಿರುವುದು ಗಮನಾರ್ಹವಾಗಿದೆ.

Similar News