ರಾಮ್‌ಪುರ ಚುನಾವಣೆಯಲ್ಲಿ ‘‘ಅಕ್ರಮ’’; ಮರು ಮತದಾನಕ್ಕೆ ಅಖಿಲೇಶ್ ಆಗ್ರಹ

Update: 2022-12-09 15:29 GMT

ಲಕ್ನೋ, ಡಿ. 9: ಉತ್ತರಪ್ರದೇಶದ ರಾಮ್‌ಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಗೆ ಮರುಮತದಾನ ನಡೆಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav) ಶುಕ್ರವಾರ ಒತ್ತಾಯಿಸಿದ್ದಾರೆ. ಉಪಚುನಾವಣೆಯಲ್ಲಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸೋತ ಬಳಿಕ ಅವರು ಈ ಒತ್ತಾಯವನ್ನು ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸೋಮವಾರ ನಡೆದ ಮತದಾನದ ವೇಳೆ, ಪಕ್ಷದ ಬೆಂಬಲಿಗರಿಗೆ ಮತದಾನ ಮಾಡಲು ಪೊಲೀಸರು ಮತ್ತು ಸರಕಾರ ಅವಕಾಶ ನೀಡಿಲ್ಲ ಎಂದು ಪಕ್ಷ ಆರೋಪಿಸಿತ್ತು. ರಾಮ್‌ಪುರದಲ್ಲಿ ಕೇವಲ 33% ಮತದಾನವಾಗಿದೆ.

ಗುರುವಾರ ನಡೆದ ಮತ ಎಣಿಕೆಯಲ್ಲಿ, ಸಮಾಜವಾದಿ ಪಕ್ಷದ ಅಭ್ಯರ್ಥಿ ಮುಹಮ್ಮದ್ ಅಸೀಮ್(Muhammad Aseem) ರಾಜ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಕಾಶ್ ಸಕ್ಸೇನಾ (Akash Saxena)ವಿರುದ್ಧ ಸೋತಿದ್ದಾರೆ. ಮುಹಮ್ಮದ್ ಅಸೀಮ್ ರಾಜಗೆ ಕ್ಷೇತ್ರದ ಹಾಲಿ ಅಭ್ಯರ್ಥಿ ಅಝಮ್ ಖಾನ್‌(Azam Khan)ರ ಬೆಂಬಲವಿತ್ತು. ಖಾನ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದಾರೆ. ಈ ಕ್ಷೇತ್ರವನ್ನು ಬಿಜೆಪಿ ಗೆದ್ದಿರುವುದು ಮೊದಲ ಬಾರಿಯಾಗಿದೆ.

ರಾಮ್‌ಪುರವು ಅಝಮ್‌ಖಾನ್‌ರ ಭದ್ರಕೋಟೆಯಾಗಿದೆ. 2019ರಲ್ಲಿ ಅವರು ಮಾಡಿದ್ದಾರೆನ್ನಲಾದ ದ್ವೇಷಭಾಷಣಕ್ಕೆ ಸಂಬಂಧಿಸಿ ಅವರು ಜೈಲಿನಲ್ಲಿದ್ದಾರೆ. ಅವರ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಾಸಕ ಹುದ್ದೆಯಿಂದ ಅವರು ಅನರ್ಹಗೊಂಡಿದ್ದರು.

ಪದೇ ಪದೇ ದೂರುಗಳನ್ನು ನೀಡಿರುವ ಹೊರತಾಗಿಯೂ, ಚುನಾವಣಾ ಆಯೋಗವು ರಾಮ್‌ಪುರ ಆಡಳಿತದ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದಾಗಿ ಯಾದವ್ ಶುಕ್ರವಾರ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘‘ಈ ಎಲ್ಲಾ ಘಟನೆಗಳ ಬಗ್ಗೆ ಚುನಾವಣಾ ಆಯೋಗವು ಯಾವುದೇ ಕ್ರಮವನ್ನು ತೆಗೆದುಕೊಳ್ಳದಿದ್ದರೆ ನಾವು ಯಾರ ಮೇಲೆ ವಿಶ್ವಾಸ ಇಡಬೇಕು?’’ ಎಂದು ಅವರು ಪ್ರಶ್ನಿಸಿದರು.

‘‘ರಾಮ್‌ಪುರ ಜಿಲ್ಲಾಡಳಿತವು ನಮ್ಮ ಬೆಂಬಲಿಗರನ್ನು ಅವಮಾನಿಸಿದೆ. ಕೆಲವರ ಮೇಲೆ ಹಲ್ಲೆಯನ್ನೂ ನಡೆಸಲಾಗಿದೆ ಹಾಗೂ ಮತದಾನ ಮಾಡದಂತೆ ತಡೆಯಲಾಗಿದೆ’’ ಎಂದು ಅವರು ಆರೋಪಿಸಿದರು.

ಈ ಆರೋಪಗಳನ್ನು ರಾಮ್‌ಪುರ ಜಿಲ್ಲಾಡಳಿತ ಮತ್ತು ಉತ್ತರಪ್ರದೇಶ ಸರಕಾರ ನಿರಾಕರಿಸಿವೆ. ಉಪಚುನಾವಣೆಯು ಮುಕ್ತ ಮತ್ತು ನ್ಯಾಯೋಚಿತವಾಗಿತ್ತು ಎಂದು ಹೇಳಿದೆ.

Similar News