ಅಸ್ಸಾಂ-ಮೇಘಾಲಯ ಗಡಿ ಒಪ್ಪಂದಕ್ಕೆ ಹೈಕೋರ್ಟ್ ತಡೆ

Update: 2022-12-09 15:40 GMT

ಶಿಲ್ಲಾಂಗ್ (ಮೇಘಾಲಯ), ಡಿ. 9: ಅಸ್ಸಾಂ(Assam) ಮತ್ತು ಮೇಘಾಲಯ (Meghalaya)ರಾಜ್ಯಗಳ ನಡುವಿನ ಗಡಿ ಒಪ್ಪಂದವೊಂದಕ್ಕೆ ಮೇಘಾಲಯ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ವಿಧಿಸಿದೆ. ಉಭಯ ರಾಜ್ಯಗಳ ನಡುವಿನ 12 ವಿವಾದಿತ ಗಡಿ ಸ್ಥಳಗಳ ಪೈಕಿ ಆರು ಸ್ಥಳಗಳ ವಿವಾದವನ್ನು ಇತ್ಯರ್ಥಪಡಿಸಿರುವ ಒಪ್ಪಂದ ಇದಾಗಿದೆ.

ಫೆಬ್ರವರಿ 23ರಂದು ನಡೆಯಲಿರುವ ಮುಂದಿನ ವಿಚಾರಣೆಯವರೆಗೆ ತಡೆಯಾಜ್ಞೆಯು ಜಾರಿಯಲ್ಲಿರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ವಿವಾದಗಳನ್ನು ಕೊನೆಗೊಳಿಸುವ ಒಪ್ಪಂದವೊಂದಕ್ಕೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮಾರ್ಚ್ 29ರಂದು ಸಹಿ ಹಾಕಿದ್ದರು. ಈ ಒಪ್ಪಂದವು ಐತಿಹಾಸಿಕ ಎಂಬುದಾಗಿ ಗೃಹ ಸಚಿವ ಅಮಿತ್ ಶಾ (Amit Shah)ಬಣ್ಣಿಸಿದ್ದರು.

1972 ಜನವರಿ 21ರಂದು ಅಸ್ಸಾಂ ನಿಂದ ಮೇಘಾಲಯವನ್ನು ವಿಭಜಿಸಿದಂದಿನಿಂದ ಎರಡು ರಾಜ್ಯಗಳ ನಡುವೆ ಗಡಿ ವಿವಾದ ಹೊಗೆಯಾಡುತ್ತಾ ಇದೆ. ಈ ವಿಭಜನೆಗೆ ಅನುವು ಮಾಡಿಕೊಟ್ಟಿರುವ 1971ರ ಅಸ್ಸಾಂ ಮರುವಿಂಗಡಣಾ ಕಾಯ್ದೆಯನ್ನು ಮೇಘಾಲಯ ಪ್ರಶ್ನಿಸಿದ ಬಳಿಕ, 12 ಸ್ಥಳಗಳಲ್ಲಿ ಗಡಿ ವಿವಾದಗಳು ಉದ್ಭವಿಸಿವೆ.

ಎರಡು ರಾಜ್ಯಗಳ ನಡುವಿನ 36.79 ಚದರ ಕಿಲೋಮೀಟರ್ ಪ್ರದೇಶವು ವಿವಾದಿತವಾಗಿದೆ. ಮಾರ್ಚ್ 29ರಂದು ಸಹಿ ಹಾಕಲಾದ ಒಪ್ಪಂದದ ಪ್ರಕಾರ, ವಿವಾದಿತ ಸ್ಥಳದ 18.51 ಚದರ ಕಿಲೋಮೀಟರ್ ಜಮೀನು ಅಸ್ಸಾಂಗೆ ಮತ್ತು 18.28 ಚದರ ಕಿಲೋಮೀಟರ್ ಜಮೀನು ಮೇಘಾಲಯಕ್ಕೆ ಸೇರುತ್ತದೆ.

ಖಾಸಿ ಜನಾಂಗೀಯ ಗುಂಪುಗಳಿಗೆ ಹಿಂದೆ ಸೇರಿದ್ದ ಸಯೀಮ್‌ಶಿಪ್(Seemship) ಮತ್ತು ಸಿರ್ದಾರ್‌ಶಿಪ್(Sirdarship) ಎಂಬ ಸ್ವತಂತ್ರ ಬುಡಕಟ್ಟು ರಾಜ್ಯಗಳ ನಾಲ್ವರು ಮುಖ್ಯಸ್ಥರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಈ ತಡೆಯಾಜ್ಞೆ ನೀಡಿದೆ.

ತಮ್ಮೊಂದಿಗೆ ಸಮಾಲೋಚಿಸದೆ ಅಸ್ಸಾಮ್ ಮತ್ತು ಮೇಘಾಲಯ ಸರಕಾರಗಳು ಒಪ್ಪಂದಕ್ಕೆ ಸಹಿ ಹಾಕಿವೆ ಎಂಬುದಾಗಿ ಅರ್ಜಿದಾರರು ವಾದಿಸಿದ್ದಾರೆ.

Similar News