ಬುಲೆಟ್ ಟ್ರೈನ್ ಯೋಜನೆ : ಮಹಾರಾಷ್ಟ್ರದಲ್ಲಿ 21,997 ಕಾಂಡ್ಲಾ ಮರಗಳ ಕಡಿತಕ್ಕೆ ಬಾಂಬೆ ಹೈಕೋರ್ಟ್ ಅನುಮತಿ

Update: 2022-12-09 15:50 GMT

ಮುಂಬೈ,ಡಿ.9: ಬಾಂಬೆ ಉಚ್ಚ ನ್ಯಾಯಾಲಯವು ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್(Bullet Train) ಯೋಜನೆಗಾಗಿ ಮುಂಬೈ,ಪಾಲ್ಘರ್ ಮತ್ತು ಥಾಣೆಯಲ್ಲಿ 21,997 ಕಾಂಡ್ಲಾ ಮರಗಳನ್ನು ಕಡಿಯಲು ಶುಕ್ರವಾರ ನ್ಯಾಷನಲ್ ಹೈ ಸ್ಪೀಡ್ ರೇಲ್ ಕಾರ್ಪೊರೇಷನ್ (NHSRC)ಗೆ ಅನುಮತಿಯನ್ನು ನೀಡಿದೆ.

ಯೋಜನೆಯೊಂದಿಗೆ ತಳುಕು ಹಾಕಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ನ್ಯಾಯಾಧೀಶ ದೀಪಂಕರ ದತ್ತಾ (Deepankar Dutta)ಮತ್ತು ನ್ಯಾ.ಅಭಯ ಅಹುಜಾ(Abhaya Ahuja) ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿತು.

ಕಾಂಡ್ಲಾ ಮರಗಳ ಕಡಿತಕ್ಕೆ ಅನುಮತಿ ಕೋರಿ ಎನ್‌ಎಚ್‌ಎಸ್‌ಆರ್‌ಸಿ 2020ರಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. 53,467 ಮರಗಳನ್ನು ಕಡಿಯಲು ಅದು ಆರಂಭದಲ್ಲಿ ಉದ್ದೇಶಿಸಿತ್ತಾದರೂ ಬಳಿಕ ನ್ಯಾಯಾಲಯದ ಸೂಚನೆಯ ಮೇರೆಗೆ ಸಂಖ್ಯೆಯನ್ನು ತಗ್ಗಿಸಿತ್ತು. ಕಡಿಯಲು ಮೊದಲು ಉದ್ದೇಶಿಸಲಾಗಿದ್ದ ಕಾಂಡ್ಲಾ ಮರಗಳ ಐದು ಪಟ್ಟು ಗಿಡಗಳನ್ನು ನೆಡುವುದಾಗಿ ಅದು ನ್ಯಾಯಾಲಯಕ್ಕೆ ಭರವಸೆಯನ್ನೂ ನೀಡಿತ್ತು.

ಅರ್ಜಿಯನ್ನು ವಿರೋಧಿಸಿದ್ದ ಬಾಂಬೆ ಎನ್ವಿರಾನ್‌ಮೆಂಟಲ್ ಆ್ಯಕ್ಷನ್ ಗ್ರೂಪ್,ಪರಿಹಾರ ಕ್ರಮವಾಗಿ ನೆಡಲಾಗುವ ಸಸಿಗಳ ಬದುಕುವುಳಿಯುವಿಕೆ ಕುರಿತು ಯಾವುದೇ ಅಧ್ಯಯನವನ್ನು ನಡೆಸಲಾಗಿಲ್ಲ ಮತ್ತು ಮರಗಳನ್ನು ಕಡಿಯಲು ಪರಿಸರದ ಮೇಲಿನ ಪರಿಣಾಮಗಳ ಮೌಲ್ಯಮಾಪನ ವರದಿಯನ್ನು ಒದಗಿಸಲಾಗಿಲ್ಲ ಎಂದು ಪ್ರತಿಪಾದಿಸಿತ್ತು.

ಬಾಂಬೆ ಉಚ್ಚ ನ್ಯಾಯಾಲಯದ 2018ರ ಆದೇಶದಂತೆ ಮಹಾರಾಷ್ಟ್ರದಾದ್ಯಂತ ಕಾಂಡ್ಲಾ ಮರಗಳ ನಾಶವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಯಾವುದೇ ಸಾರ್ವಜನಿಕ ಯೋಜನೆಗಾಗಿ ಯಾವುದೇ ಪ್ರಾಧಿಕಾರವು ಕಾಂಡ್ಲಾ ಮರಗಳನ್ನು ಕಡಿಯಲು ಬಯಸಿದರೆ ಉಚ್ಚ ನ್ಯಾಯಾಲಯದ ಅನುಮತಿ ಅಗತ್ಯವಾಗಿದೆ.

Similar News