ಶರ್ಜೀಲ್ ಇಮಾಮ್ ಕುರಿತು ದಿಲ್ಲಿ ಹೈಕೋರ್ಟ್ ಹೇಳಿಕೆಗಳಿಂದ ಆತನ ಪ್ರಕರಣ ಪೂರ್ವಾಗ್ರಹ ಪೀಡಿತವಾಗಬಾರದು: ಸುಪ್ರೀಂ

Update: 2022-12-09 16:03 GMT

ಹೊಸದಿಲ್ಲಿ,ಡಿ.9: ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ (Sharjeel Imam)ಕುರಿತು ದಿಲ್ಲಿ ಉಚ್ಚ ನ್ಯಾಯಾಲಯದ ಪ್ರತಿಕೂಲ ಹೇಳಿಕೆಗಳು ಆತನ ಪ್ರಕರಣವನ್ನು ಪೂರ್ವಾಗ್ರಹ ಪೀಡಿತಗೊಳಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ.

ದಿಲ್ಲಿ ಉಚ್ಚ ನ್ಯಾಯಾಲಯವು 2020ರ ದಿಲ್ಲಿ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್‌(Umar Khalid)ಗೆ ಜಾಮೀನು ನಿರಾಕರಿಸಿದ್ದ ತನ್ನ ಅ.18ರ ಆದೇಶದಲ್ಲಿ ಇಮಾಮ್ ಕುರಿತು ಪ್ರತಿಕೂಲ ಹೇಳಿಕೆಗಳನ್ನು ನೀಡಿತ್ತು.

ಹಿಂಸಾಚಾರದ ಸಂಚಿನಲ್ಲಿ ಇಮಾಮ್ ಪ್ರಮುಖ ಪಾತ್ರವನ್ನು ವಹಿಸಿದ್ದ ಎನ್ನುವುದು ವಾದಕ್ಕೆ ಅರ್ಹವಾಗಿದೆ ಎಂದು ಹೇಳಿದ್ದ ಉಚ್ಚ ನ್ಯಾಯಾಲಯವು,ಹಿಂಸಾಚಾರಕ್ಕೆ ಮುನ್ನ ಇಮಾಮ್ ಮತ್ತು ಖಾಲಿದ್ ನಡುವಿನ ಭೇಟಿಗಳನ್ನೂ ಪ್ರಸ್ತಾಪಿಸಿತ್ತು.

ದಿಲ್ಲಿಯಲ್ಲಿ ಗಲಭೆಗೆ ಕಾರಣವಾಗಿದ್ದ ಸಿಎಎ ಕುರಿತು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದ ಆರೋಪವನ್ನು ಇಮಾಮ್ ಮೇಲೆ ಹೊರಿಸಲಾಗಿದೆ.

ಇಮಾಮ್ ಡಿ.7ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಶೇಷ ರಜಾಕಾಲ ಅರ್ಜಿಯಲ್ಲಿ,ತನ್ನ ನಿಲುವನ್ನು ಮಂಡಿಸಲು ಅವಕಾಶ ನೀಡದೇ ಉಚ್ಚ ನ್ಯಾಯಾಲಯವು ತನ್ನ ಬಗ್ಗೆ ಪ್ರತಿಕೂಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಈ ಅಭಿಪ್ರಾಯಗಳು ಕ್ರಿಮಿನಲ್ ಪ್ರಕರಣದ ಅರ್ಹತೆಗೆ ಸಂಬಂಧಿಸಿದ್ದು,ಪ್ರಕರಣದಲ್ಲಿ ತಾನೂ ಆರೋಪಿಯಾಗಿರುವುದರಿಂದ ಅವು ತನ್ನ ಜಾಮೀನು ಅರ್ಜಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದ್ದರು.

ತನ್ನ ಅಭಿಪ್ರಾಯಗಳು ಪ್ರಕರಣದ ಅರ್ಹತೆಯ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡಬಾರದು ಎಂದು ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿರುವುದನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯವು,ಅರ್ಜಿದಾರರ ಪಾತ್ರದ ಕುರಿತು ಯಾವುದೇ ಅಭಿಪ್ರಾಯವು ಅರ್ಜಿದಾರರ ಬಗ್ಗೆ ಯಾವುದೇ ರೀತಿಯಲ್ಲಿ ಪೂರ್ವಾಗ್ರಹವನ್ನುಂಟು ಮಾಡಕೂಡದು ಎಂದು ಸ್ಪಷ್ಟಪಡಿಸಿತು.

ದೋಷನಿರ್ಣಯದ ವಿರುದ್ಧ ಅಂತಿಮ ಮೇಲ್ಮನವಿಯ ವಿಚಾರಣೆಯ ರೀತಿಯಲ್ಲಿ ಜಾಮೀನು ಅರ್ಜಿಗಳ ವಿಚಾರಣೆಯು ಸುದೀರ್ಘಗೊಂಡಾಗ ಇಂತಹ ಅವಲೋಕನಗಳನ್ನು ಮಾಡಲಾಗುತ್ತದೆ ಎಂದು ಬೆಟ್ಟು ಮಾಡಿದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎ.ಎಸ್.ಓಕಾ ಅವರ ಪೀಠವು,10 ನಿಮಿಷಗಳಿಗಿಂತ ಹೆಚ್ಚು ಜಾಮೀನು ಅರ್ಜಿಗಳ ವಿಚಾರಣೆಯನ್ನು ನಡೆಸಕೂಡದು ಎಂದು ಹೇಳಿತು.

Similar News