ಸಾವುಗಳು ಮತ್ತು ವಾಯುಮಾಲಿನ್ಯ ನಡುವೆ ನೇರ ಸಂಬಂಧವನ್ನು ಸ್ಥಾಪಿಸಲು ದತ್ತಾಂಶಗಳಿಲ್ಲ:ಕೇಂದ್ರ

Update: 2022-12-09 16:17 GMT

ಹೊಸದಿಲ್ಲಿ,ಡಿ.9: ವಾಯುಮಾಲಿನ್ಯ ಹಾಗೂ ಸಾವುಗಳು ಮತ್ತು ಕಾಯಿಲೆಗಳ ನಡುವೆ ನೇರ ಸಂಬಂಧವನ್ನು ಸ್ಥಾಪಿಸಲು ಯಾವುದೇ ನಿರ್ಣಾಯಕ ದತ್ತಾಂಶಗಳು ಲಭ್ಯವಿಲ್ಲ ಎಂದು ಆರೋಗ್ಯ ರಾಜ್ಯಸಚಿವೆ ಭಾರತಿ ಪ್ರವೀಣ ಪವಾರ್ (Bharti Praveen Pawar)ಅವರು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.

ಆದಾಗ್ಯೂ,ವಾಯುಮಾಲಿನ್ಯವು ಉಸಿರಾಟ ತೊಂದರೆಗಳು ಮತ್ತು ಸಂಬಂಧಿತ ಕಾಯಿಲೆಗಳನ್ನುಂಟು ಮಾಡುವ ಹಲವಾರು ಅಂಶಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ವಾತಾವರಣದ ಜೊತೆಗೆ ವ್ಯಕ್ತಿಯ ಆಹಾರ ಕ್ರಮ,ಔದ್ಯೋಗಿಕ ಪರಿಸರ,ಸಾಮಾಜಿಕ-ಆರ್ಥಿಕ ಸ್ಥಾನಮಾನ,ವೈದ್ಯಕೀಯ ಇತಿಹಾಸ, ಪ್ರತಿರೋಧಕತೆ,ಆನುವಂಶಿಕತೆ ಇತ್ಯಾದಿಗಳು ಸೇರಿದಂತೆ ಅನೇಕ ಅಂಶಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಪವಾರ್ ಲಿಖಿತ(Pawar written) ಉತ್ತರದಲ್ಲಿ ತಿಳಿಸಿದರು.

ಹಲವು ಉಸಿರಾಟದ ಕಾಯಿಲೆಗಳನ್ನು ಉಲ್ಬಣಗೊಳಿಸುವ ಅಂಶಗಳಲ್ಲಿ ವಾಯುಮಾಲಿನ್ಯವೂ ಒಂದಾಗಿದೆಯಾದರೂ ಅದರಿಂದಾಗಿಯೇ ಸಂಭವಿಸಿದ ಸಾವುಗಳ ಕುರಿತು ನಿರ್ದಿಷ್ಟ ಮಾಹಿತಿ ಲಭ್ಯವಿಲ್ಲ ಎಂದು ಅವರು ಹೇಳಿದರು. ವಾಯುಮಾಲಿನ್ಯವನ್ನು ನಿಯಂತ್ರಿಸಲು ಸರಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ,ಸ್ವಚ್ಛ ಭಾರತ ಅಭಿಯಾನದಂತಹ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು.

ಪಂಜಾಬ,ಹರ್ಯಾಣ,ಉತ್ತರ ಪ್ರದೇಶ ಮತ್ತು ದಿಲ್ಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯಿಂದ ವಾಯುಮಾಲಿನ್ಯವನ್ನು ನಿಯಂತ್ರಿಸಲು ಕೈಗೊಳ್ಳಲಾಗಿರುವ ರೈತರಿಗೆ ಸಬ್ಸಿಡಿಯಂತಹ ಅಗತ್ಯ ಕ್ರಮಗಳನ್ನು ಅವರು ವಿವರಿಸಿದರು. ನಗರ ಪ್ರದೇಶಗಳಿಗೆ ನಿರ್ದಿಷ್ಟವಾಗಿ ಶುದ್ಧ ವಾಯು ಕ್ರಿಯಾ ಯೋಜನೆಯನ್ನು 10 ಲ.ಕ್ಕೂ ಅಧಿಕ ಜನಸಂಖ್ಯೆಯ 131 ನಗರಗಳಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದೂ ಪವಾರ್ ತಿಳಿಸಿದರು.

Similar News