ಬೆಳೆಗಳಿಗೆ ಬೆಂಬಲ ಬೆಲೆ ಖಾತರಿಗೆ ಆಗ್ರಹಿಸಿ ದಿಲ್ಲಿಯಲ್ಲಿ ಎಐಕೆಸಿ ಧರಣಿ

Update: 2022-12-09 16:22 GMT

ಹೊಸದಿಲ್ಲಿ, ಫೆ.10: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ಹಾಗೂ ಕಳೆದ ವರ್ಷ ಕೃಷಿಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭ ಸಾವನ್ನಪ್ಪಿದ ರೈತರ ಬಂಧುಗಳಿಗೆ ಪರಿಹಾರಕ್ಕಾಗಿ ಆಗ್ರಹಿಸಿ ಶುಕ್ರವಾರ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಅಖಿಲ ಭಾರತ ಕಿಸಾನ್ ಕಾಂಗ್ರೆಸ್(AIKC) ನ ನೇತೃತ್ವದಲ್ಲಿ ಸಾವಿರಾರು ರೈತರು ಧರಣಿ ನಡೆಸಿದರು.

ದಿಲ್ಲಿಯ ಗಡಿಯಲ್ಲಿ ಸುಮಾರು ಒಂದು ವರ್ಷ ಕಾಲ ನಡೆದ ಕೃಷಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯನ್ನು ಕೊನೆಗೊಳಿಸುವುದಕ್ಕಾಗಿ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೆ ಮೋದಿ (Modi)ಸರಕಾರವು ದ್ರೋಹ ಬಗೆದಿದೆಯೆಂದು ಕಾಂಗ್ರೆಸ್(Congress) ಪಕ್ಷದ ರೈತ ಘಟಕವಾ ಎಐಕೆಸಿ ಆಪಾದಿಸಿದೆ.

ಧರಣಿಯ ಸಂದರ್ಭ ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಹರಗೋವಿಂದ ಸಿಂಗ್ ತಿವಾರಿ ಅವರು, ‘‘ ಕೇಂದ್ರ ಸರಕಾರವು ರೈತರ ಜೊತೆ ಸಹಕರಿಸುತ್ತಿಲ್ಲ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’’ ವೆಂದು ಟೀಕಿಸಿದರು.

ತಮ್ಮ ಹಕ್ಕುಗಳಿಗಾಗಿ ಹೋರಾಡಿದ ಸಂದರ್ಭ ತಮ್ಮ ಪ್ರಾಣವನ್ನೇ ಬಲಿಗೊಟ್ಟ ರೈತರ ಕುಟುಂಬಗಳಿಗೆ ತಕ್ಷಣವೇ ಪರಿಹಾರಧನವನ್ನು ಬಿಡುಗಡೆಗೊಳಿಸಬೇಕೆಂದು ಹರಗೋಬಿಂದ್ ಸಿಂಗ್ (Hargobind Singh)ಆಗ್ರಹಿಸಿದರು. ತಮ್ಮ ಪ್ರಾಣವನ್ನು ಕಳೆದುಕೊಂಡ ರೈತರ ಪಟ್ಟಿ ಕೂಡಾ ಕೇಂದ್ರದ ಬಳಿಯಿಲ್ಲದಿರುವುದು ದುರದೃಷ್ಟಕರ. ಹೀಗಿರುವಾಗ ಅದು ಹೇಗೆ ಪರಿಹಾರ ನೀಡುತ್ತದೆ? ಎಂದವರು ಪ್ರಶ್ನಿಸಿದರು.

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ದರವನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಕೂಡಾ ಹರಗೋಬಿಂದ್ ಸಿಂಗ್ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

Similar News