ಕಾಶ್ಮೀರಿ ಪತ್ರಕರ್ತ ಫಹದ್ ಶಾಗೆ ಎರಡು ಪ್ರಕರಣಗಳಲ್ಲಿ ಜಾಮೀನು

Update: 2022-12-09 16:29 GMT

 ಶ್ರೀನಗರ,ಡಿ.9: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಕಾಶ್ಮೀರಿ ಪತ್ರಕರ್ತ ಫಹದ್ ಶಾ (Fahad Shah) ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯ ಜಾಮೀನು ನೀಡಿದೆ. ಸಫಾಕಾಡಲ್ ಹಾಗೂ ಪುಲ್ವಾಮಾ ಪಟ್ಟಣಗಳಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ಅವರಿಗೆ ಜಾಮೀನು ಬಿಡುಗಡೆ ದೊರೆತಿದೆ. ಫಹದ್ ಶಾ ವಿರುದ್ಧ ಇನ್ನೊಂದು ಪ್ರಕರಣ ಜಮ್ಮು(Jammu)ವಿನಲ್ಲಿ ದಾಖಲಾಗಿದ್ದು, ಅದರ ವಿಚಾರಣೆ ಬಾಕಿಯಿದೆಯೆಂದು ಅವರ ವಕೀಲ ಉಮೈರ್ (Umair)ರೊಂಗಾ ತಿಳಿಸಿದ್ದಾರೆ. ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಫಹದ್ ಅವರ ಬಂಧನವನ್ನು ಕೂಡಾ ನ್ಯಾಯಾಲಯದಲ್ಲಿ ತಾವು ಪ್ರಶ್ನಿಸಿದ್ದು, ಅದು ಡಿಸೆಂಬರ್ 15ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದರು.

 ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ತನಿಖಾಧಿಕಾರಿಗಳಿಗೆ ಯಾವುದೇ ವ್ಯಕ್ತಿಯನ್ನು ನ್ಯಾಯಾಂಗದ ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಕಸ್ಟಡಿಯಲ್ಲಿರಿಸಬಹುದಾಗಿದೆ.  ರಾಜ್ಯದ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಪಾಲನೆಗೆ ಅಡ್ಡಿಯುಂಟು ಮಾಡುವಂತಹ ಚಟುವಟಿಕೆಯಲ್ಲಿ ತೊಡಗಿದ್ದಾರೆಂಬ ಆರೋಪದಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸಲು ಸಾರ್ವಜನಿಕ ಸುರಕ್ಷತಾ ಕಾಯ್ದೆ ಅವಕಾಶ ನೀಡುತ್ತದೆ.

Similar News