ಜಾಗತಿಕ ಸೂಚ್ಯಂಕದಲ್ಲಿ 193 ದೇಶಗಳ ಪೈಕಿ ಭಾರತೀಯ ಪಾಸ್‌ಪೋರ್ಟ್‌ಗೆ 69ನೇ ಸ್ಥಾನ

Update: 2022-12-09 17:07 GMT

ಹೊಸದಿಲ್ಲಿ,ಡಿ.9:ಆರ್ಟನ್ ಕ್ಯಾಪಿಟಲ್ ಬಿಡುಗಡೆಗೊಳಿಸಿರುವ ಇತ್ತೀಚಿನ ಜಾಗತಿಕ ಪಾಸ್‌ಪೋರ್ಟ್ (Passport)ಸೂಚ್ಯಂಕದಲ್ಲಿ 193 ದೇಶಗಳ ಪೈಕಿ ಭಾರತೀಯ ಪಾಸ್‌ಪೋರ್ಟ್ 69ನೇ ಸ್ಥಾನದಲ್ಲಿದೆ. ಸಂಯುಕ್ತ ಅರಬ್ ಗಣರಾಜ್ಯಗಳ (UAE) ಪಾಸ್‌ಪೋರ್ಟ್ ಅಗ್ರಸ್ಥಾನದಲ್ಲಿದೆ.

ಸೂಚ್ಯಂಕದ ಪ್ರಕಾರ ಭಾರತೀಯರು 24 ದೇಶಗಳಿಗೆ ವೀಸಾರಹಿತವಾಗಿ ಪ್ರಯಾಣಿಸಬಹುದು. ಆದರೆ 48 ದೇಶಗಳಿಗೆ ಆಗಮನದ ನಂತರ ವೀಸಾ ಅಗತ್ಯವಿದೆ ಹಾಗೂ 126 ದೇಶಗಳಿಗೆ ವೀಸಾ ಹೊಂದಿರುವುದು ಅನಿವಾರ್ಯವಾಗಿದೆ.

ಜಾಗತಿಕ ಸೂಚ್ಯಂಕದಲ್ಲಿ10 ಐರೋಪ್ಯ ದೇಶಗಳಾದ ಜರ್ಮನಿ, ಸ್ವೀಡನ್, ಫಿನ್ಲಂಡ್, ಸ್ಪೇನ್, ಲಕ್ಷೆಂಬರ್ಗ್, ಫ್ರಾನ್ಸ್, ಇಟಲಿ,ನೆದರ್‌ಲ್ಯಾಂಡ್ಸ್, ಆಸ್ಟ್ರಿಯಾ,ಸ್ವಿಟ್ಜರ್‌ಲ್ಯಾಂಡ್  ಹಾಗೂ ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿವೆ.ಅಮೆರಿಕ,ಡೆನ್ಮಾರ್ಕ್,ಬೆಲ್ಜಿಯಂ,ಪೋರ್ಚುಗಲ್,ನಾರ್ವೆ,ಪೋಲಂಡ್,ಅಯರ್ಲಂಡ್ ಮತ್ತು ನ್ಯೂಝಿಲಂಡ್ ಮೂರನೇ ಸ್ಥಾನದಲ್ಲಿವೆ. ಅಫ್ಘಾನಿಸ್ತಾನ 97ನೇ ಸ್ಥಾನದಲ್ಲಿದೆ.

ಯುರೋಪ್‌ನಲ್ಲಿ ಹೆಚ್ಚುತ್ತಿರುವ ಸಂಘರ್ಷಗಳು ಮತ್ತು ಗಡಿಗಳ ಕುರಿತು ಬೆಳೆಯುತ್ತಿರುವ ಉದ್ವಿಗ್ನತೆಗಳ ಹೊರತಾಗಿಯೂ ಜಾಗತಿಕ ಚಲನಶೀಲತೆ ಏರುಗತಿಯಲ್ಲಿದೆ ಎಂದು ಆರ್ಟನ್ ಹೇಳಿಕೆಯಲ್ಲಿ ತಿಳಿಸಿದೆ.

 ಸಾಂಕ್ರಾಮಿಕದ ಪಶ್ಚಾತ್ ಆಘಾತಗಳನ್ನು ಜಗತ್ತು ಈಗಲೂ ಅನುಭವಿಸುತ್ತಿದ್ದರೂ ಅಚ್ಚರಿದಾಯಕವಾಗಿ ಪ್ರಯಾಣವು ಹಿಂದೆಂದೂ ಇಷ್ಟೊಂದು ಸುಲಭವಾಗಿರಲಿಲ್ಲ. ವಿಶ್ವಾದ್ಯಂತ ಪಾಸ್‌ಪೋರ್ಟ್‌ಗಳು ಶಕ್ತಿಯನ್ನು ವರ್ಧಿಸಿಕೊಳ್ಳುತ್ತಿದ್ದು,ಈ ಪ್ರವೃತ್ತಿ 2023ರಲ್ಲಿಯೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ. ಭಾರತವು ಸೂಚ್ಯಂಕದಲ್ಲಿ ಗಾಂಬಿಯಾ,ಘಾನಾ,ಉಜ್ಬೆಕಿಸ್ತಾನ್ ಮತ್ತು ತಾಂಜಾನಿಯಾಗಳ ಜೊತೆಗೆ ಸ್ಥಾನವನ್ನು ಹಂಚಿಕೊಂಡಿದೆ.

Similar News