ತಮಿಳುನಾಡಿಗೆ ‘ಮಾಂಡೌ ಸ್’ ಚಂಡಮಾರುತ ಭೀತಿ : ಚೆನ್ನೈನಲ್ಲಿ ಭಾರೀ ಮಳೆ, ಸಂಚಾರ ಅಸ್ತವ್ಯಸ್ತ

ಮಹಾಬಲಿಪುರಂನಲ್ಲಿ ತೀರ ಪ್ರದೇಶಗಳ ಜನರ ಸ್ಥಳಾಂತರ

Update: 2022-12-09 17:15 GMT

ಚೆನ್ನೈ,ಡಿ.9: ಮಾಂಡೌಸ್ ಚಂಡಮಾರುತ(Cyclone Mandous)ವು ಶನಿವಾರ ನಸುಕಿನ ವೇಳೆಗೆ ಪುದುಚೇರಿ (Puducherry)ಹಾಗೂ ತಮಿಳುನಾಡಿನ ಮಹಾಬಲಿಪುರಂ (Mahabalipuram)ಮಧ್ಯದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿರುವಂತೆಯೇ, ಚೆನ್ನೈ (Chennai)ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಶುಕ್ರವಾರ ಭಾರೀ ಮಳೆಯಾಗಿದೆ.

ಮಹಾಬಲಿಪುರಂನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಚಂಡಮಾರುತ ಅಪ್ಪಳಿಸುವ ಭೀತಿಯಿರುವ ಹಿನ್ನೆಲೆಯಲ್ಲಿ ಮಹಾಬಲಿಪುರಂನ ತಗ್ಗುಪ್ರದೇಶಗಳಲ್ಲಿ ವಾಸಿಸುವ ಹಲವಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

 ಸಮೀಪ ಪುದುಚೇರಿಯಲ್ಲಿ ಚಂಡಮಾರುತದ ಪರಿಣಾಮವಾಗಿ ಭಾರೀ ಎತ್ತರದ ಅಲೆಗಳು ಅಪ್ಪಳಿಸುತ್ತಿರುವುದರಿಂದ ತೀರಾ ಪ್ರದೇಶದಲ್ಲಿ ಕಡಲಕೊರೆತವುಂಟಾಗಿದ್ದು,15 ಮನೆಗಳು ಕುಸಿದುಬಿದ್ದಿವೆ.

 ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಚೆನ್ನೈ, ಚೆಂಗಲಪಟ್ಟು ಕಾಂಚಿಪುರಂ, ತಿರುವಲ್ಲೂರು, ವಿಲ್ಲುಪುರಂ, ಕಡಲೂರು ಸೇರಿದಂತೆ 15 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

 ಶುಕ್ರವಾರ ಆರು ಗಂಟೆಯಿಂದ ಮಧ್ಯರಾತ್ರಿಯವರೆಗೆ ಚೆನ್ನೈನಿಂದ ಹೊರಡುವ ಹಲವಾರು ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಈ ಚಂಡಮಾರುತಕ್ಕೆ ಮಂಡೌಸ್ ಎಂಬ ಹೆಸರನ್ನು ಯುಎಇ ಆಯ್ಕೆ ಮಾಡಿದೆ. ಮಂಡೌಸ್ ಎಂದರೆ ಅರೇಬಿಕ್‌ನಲ್ಲಿ ಖಜಾನೆಪೆಟ್ಟಿಗೆ ಎಂಬ ಅರ್ಥವಿದೆ.

Similar News