ಧಾರ್ಮಿಕ ಮೆರವಣಿಗೆಗಳ ನಿಯಂತ್ರಣ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Update: 2022-12-09 17:22 GMT

ಹೊಸದಿಲ್ಲಿ,ಡಿ.9: ದೇಶಾದ್ಯಂತ ಧಾರ್ಮಿಕ ಮೆರವಣಿಗೆಗಳ ನಿಯಂತ್ರಣಕ್ಕೆ ನಿರ್ದೇಶನಗಳನ್ನು ಕೋರಿ ಎನ್‌ಜಿಒ ಸಿಟಿಝನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿತು. ಎಲ್ಲ ಧಾರ್ಮಿಕ ಮೆರವಣಿಗೆಗಳನ್ನು ಗಲಭೆಗಳ ಮೂಲವೆಂಬಂತೆ ಬಿಂಬಿಸದಂತೆ ಅದು ಅರ್ಜಿದಾರ ಸಂಸ್ಥೆಗೆ ಸೂಚಿಸಿತು.

ಸರಕಾರದ ಅಧೀನದಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯ ಪ್ರತಿಯೊಂದು ಕೇತ್ರಕ್ಕೂ ಸರ್ವೋಚ್ಚ ನ್ಯಾಯಾಲಯವನ್ನು ಎಳೆಯುವಂತಿಲ್ಲ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ (DY Chandrachud)ಹಾಗೂ ನ್ಯಾ.ಪಿ.ಎಸ್.ನರಸಿಂಹ(PS Narasimha) ಅವರನ್ನೊಳಗೊಂಡ ಪೀಠವು ಹೇಳಿತು.

ಸರ್ವೋಚ್ಚ ನ್ಯಾಯಾಲಯವು ಮಾತ್ರ ಏನನ್ನಾದರೂ ಮಾಡಬಹುದು ಎಂದು ಹೇಳಿದ ಎನ್‌ಜಿಒ ಪರ ಹಿರಿಯ ನ್ಯಾಯವಾದಿ ಸಿ.ಯು.ಸಿಂಗ್ (C.U.Singh)ಅವರು,‘ವಿಚಾರಣಾ ಆಯೋಗಗಳ ವರದಿಗಳನ್ನು ನಾನೇ ಖುದ್ದಾಗಿ ಪರಿಶೀಲಿಸಿದ್ದೇನೆ. ನಾವು ಮಾರ್ಗಸೂಚಿಗಳನ್ನು ಮತ್ತು ಈ ಅನುಮತಿಗಳನ್ನು ಹೇಗೆ ನೀಡಬಹುದು ಎನ್ನುವುದನ್ನು ರೂಪಿಸಬೇಕಿದೆ. ಇಂದು ಮೆರವಣಿಗೆಗಳಲ್ಲಿ ಖಡ್ಗದಂತಹ ಶಸ್ತ್ರಾಸ್ತ್ರಗಳನ್ನು ಝಳಪಿಸಲಾಗುತ್ತಿದೆ ಮತ್ತು ಪ್ರತಿ ಧಾರ್ಮಿಕ ಉತ್ಸವದಲ್ಲಿಯೂ ಇದು ಸಂಭವಿಸುತ್ತಿದೆ ’ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು ಅನುಮತಿಯು ತಪ್ಪಾಗಿದ್ದರೆ ಅದನ್ನು ವಿಧಿ 226ರಡಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ. ಪ್ರಾರ್ಥನೆಗಳನ್ನು ನ್ಯಾಯಾಂಗವು ನಿರ್ವಹಿಸಲಾಗುವುದಿಲ್ಲ. ಅದು ನ್ಯಾಯಿಕ ಪರಮಾದೇಶದ ರಿಟ್ ಅನ್ನು ಬಯಸುತ್ತದೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸರಕಾರದ ಅಧಿಕಾರ ವ್ಯಾಪ್ತಿಗೆ ಸೇರುತ್ತದೆ ಎಂದು ಹೇಳಿದರು.

ಪದೇ ಪದೇ ಸಂಘರ್ಷಗಳು ಸಂಭವಿಸುತ್ತವೆ ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ. ಧಾರ್ಮಿಕ ಮೆರವಣಿಗೆಗಳಲ್ಲಿ ಸರಣಿಯೋಪಾದಿ ಗಲಭೆಗಳು ನಡೆಯುತ್ತಿವೆ ಎಂದು ಸಿಂಗ್ ಹೇಳಿದರು.

‘ಎಲ್ಲ ಧಾರ್ಮಿಕ ಉತ್ಸವಗಳು ಗಲಭೆಗಳಿಗೆ ಸಮಯವಾಗಿವೆ ಎಂದು ಬಿಂಬಿಸಲು ನಾವೇಕೆ ಯಾವಾಗಲೂ ಬಯಸುತ್ತೇವೆ? ದೇಶದಲ್ಲಿಯ ಒಳ್ಳೆಯ ಬೆಳವಣಿಗೆಗಳನ್ನು ನಾವು ನೋಡೋಣ.ಮಹಾರಾಷ್ಟ್ರದಲ್ಲಿ ನೋಡಿ,ಗಣೇಶ ಪೂಜೆ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ,ಆದರೂ ಅಲ್ಲಿ ಗಲಭೆಗಳು ನಡೆಯುವುದಿಲ್ಲ ’ ಎಂದು ನ್ಯಾ.ಚಂದ್ರಚೂಡ್ ಹೇಳಿದರು.

 ‘ದೇಶವು ವೈವಿಧ್ಯಮಯವಾಗಿದೆ. ಭಾರತದ ಒಂದು ಭಾಗದಲ್ಲಿಯ ಸ್ಥಿತಿ ಇನ್ನೊಂದಕ್ಕಿಂತ ಭಿನ್ನವಾಗಿದೆ. ನಾವು ಪ್ರಮಾಣಿತ ಕಾರ್ಯವಿಧಾನಗಳನ್ನು ತರಬೇಕು ಎಂದು ನೀವು ಬಯಸುತ್ತಿದ್ದೀರಿ ’ ಎಂದೂ ಅವರು ಹೇಳಿದರು.

Similar News