ಗುಜರಾತ್ ವಿಧಾನಸಭೆಗೆ ಏಕೈಕ ಮುಸ್ಲಿಂ ಅಭ್ಯರ್ಥಿ ಆಯ್ಕೆ

Update: 2022-12-10 08:18 GMT

ಅಹಮದಾಬಾದ್: 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಜಯ ದಾಖಲಿಸಿದ್ದು ಕಾಂಗ್ರೆಸ್‌ನ ಇಮ್ರಾನ್ ಖೇಡವಾಲಾ ವಿಧಾನಸಭೆಗೆ ಆಯ್ಕೆಯಾಗಿರುವ  ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ.

ನಿರ್ಗಮಿತ ವಿಧಾನಸಭೆಯಲ್ಲಿ ಮೂವರು ಮುಸ್ಲಿಂ ಶಾಸಕರಿದ್ದರು, ಎಲ್ಲರೂ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು.

ಅಹಮದಾಬಾದ್ ನಗರದ ಜಮಾಲ್ಪುರ್-ಖಾಡಿಯಾ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕರಾದ ಖೇಡವಾಲಾ ಅವರು ಚುನಾವಣೆಯಲ್ಲಿ 13,658 ಮತಗಳ ಅಂತರದಿಂದ ಗೆದ್ದು ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಖೇಡವಾಲಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಭೂಷಣ್ ಭಟ್ ಅವರನ್ನು ಸೋಲಿಸಿದರು, ಅಲ್ಲಿ ಎಐಎಂಐಎಂ ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಸಬೀರ್ ಕಬ್ಲಿವಾಲಾ ಕೂಡ ಕಣದಲ್ಲಿದ್ದರು.

ಕಾಂಗ್ರೆಸ್ ಪಕ್ಷವು ಮೂವರು ಹಾಲಿ ಶಾಸಕರು ಸೇರಿದಂತೆ ಆರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಇಬ್ಬರು ಶಾಸಕರು ಸೇರಿದಂತೆ ಐವರು ಅಭ್ಯರ್ಥಿಗಳು ಸೋತಿದ್ದಾರೆ.

2017 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಅಲ್ಪಸಂಖ್ಯಾತ ಸಮುದಾಯದ ಐವರು ಅಭ್ಯರ್ಥಿಗಳಲ್ಲಿ ಮೂವರು ವಿಜಯಶಾಲಿಯಾಗಿದ್ದರು.

Similar News