×
Ad

ವಿರೋಧ ಪಕ್ಷಗಳು ಒಗ್ಗಟ್ಟಾದರೆ 2024ರಲ್ಲಿ ಬಿಜೆಪಿಗೆ ಸೋಲುಣಿಸಬಹುದು: ಬಿಹಾರ ಸಿಎಂ ನಿತೀಶ್ ಕುಮಾರ್

Update: 2022-12-12 08:05 IST

ಹೊಸದಿಲ್ಲಿ: ವಿರೋಧ ಪಕ್ಷಗಳು ಒಗ್ಗಟ್ಟಾದರೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಬ ಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಸಂಯುಕ್ತ ಜನತಾದಳ ಪಕ್ಷದ ರಾಷ್ಟ್ರೀಯ ಮಂಡಳಿ ಮುಕ್ತ ಅಧಿವೇಶನದಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು hindustantimes.com ವರದಿ ಮಾಡಿದೆ.

"ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟಿನಿಂದ ಇದ್ದರೆ 2024ರಲ್ಲಿ ನಾವು ಗರಿಷ್ಠ ಸ್ಥಾನಗಳನ್ನು ಗೆಲ್ಲಬಹುದು. ನಾವು ಮೂರನೇ ರಂಗವಾಗಲು ಇಷ್ಟಪಡುವುದಿಲ್ಲ. ನಮ್ಮದು ಮುಖ್ಯ ರಂಗ" ಎಂದು ಪ್ರತಿಪಾದಿಸಿದರು.

ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡು ಸಂಯುಕ್ತ ಜನತಾದಳ, ಆರ್‍ಜೆಡಿ ಹಾಗೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಕಳೆದ ಆಗಸ್ಟ್‌ನಲ್ಲಿ ಸರ್ಕಾರ ರಚಿಸಿತ್ತು. ಆ ಬಳಿಕ ನಿತೀಶ್, ಕೇಸರಿ ಪಕ್ಷದ ಪ್ರಬಲ ಟೀಕಾಕಾರರಾಗಿದ್ದಾರೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ನಮ್ಮ ಮೈತ್ರಿ ಪಕ್ಷವಾಗಿದ್ದರೂ ನಮ್ಮ ವಿರುದ್ಧ ಕೆಲಸ ಮಾಡಿತ್ತು ಎಂದು ಅವರು ಆಪಾದಿಸಿದರು.

2020ರ ಚುನಾವಣೆಯಲ್ಲಿ ನಮ್ಮ ಪಕ್ಷ ಕಡಿಮೆ ಸ್ಥಾನಗಳನ್ನು ಗೆದ್ದಿತು. ಮೈತ್ರಿಯ ಹೊರತಾಗಿಯೂ ಬಿಜೆಪಿ ನಮ್ಮ ಸೋಲು ಖಾತರಿಪಡಿಸುವಲ್ಲಿ ನಿರತವಾಗಿತ್ತು ಎಂದು ಜೆಡಿಯು ಮುಖಂಡ ದೂರಿದರು. ಇದಕ್ಕೂ ಮುನ್ನ ಎಂದೂ ನಮ್ಮ ಪಕ್ಷ ಇಷ್ಟು ಕನಿಷ್ಠ ಸ್ಥಾನಗಳನ್ನು ಗೆದ್ದಿಲ್ಲ. ಅವರು ನಮ್ಮ ಪಕ್ಷದ ಅಭ್ಯರ್ಥಿಗಳ ಸೋಲು ಖಾತರಿಪಡಿಸಲು ಪ್ರಯತ್ನಿಸಿದ್ದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲೂ ಬಂಡಾಯಕ್ಕೆ ಬಿಜೆಪಿ ಕುಮ್ಮಕ್ಕು ನೀಡಿತು. ಮುಂದಿನ ಚುನಾವಣೆಯಲ್ಲಿ ಜನತೆ ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ hindustantimes.com ವರದಿ ಮಾಡಿದೆ. 

Similar News