ಗೋಧಿ ಚೀಲ ಕದ್ದಿದ್ದಾನೆಂದು ಆರೋಪಿಸಿ ಕಾರ್ಮಿಕನನ್ನು ಟ್ರಕ್‌ಗೆ ಕಟ್ಟಿ ಪೊಲೀಸ್ ಠಾಣೆಗೆ ಕರೆತಂದ ಚಾಲಕ

Update: 2022-12-13 08:01 GMT

ಲುಧಿಯಾನ: ಟ್ರಕ್‌ ಒಂದರಿಂದ ಎರಡು ಮೂಟೆ ಗೋಧಿ (wheat) ಕದ್ದಿದ್ದಾನೆಂಬ ಆರೋಪ ಹೊರಿಸಿ ಟ್ರಕ್‌ (truck) ಚಾಲಕ ಕಾರ್ಮಿಕನೊಬ್ಬನನ್ನು ವಾಹನದ ಬಾನೆಟ್‌ಗೆ ಕಟ್ಟಿ ಹಾಕಿದ್ದ ವೀಡಿಯೋವೊಂದು ಸೋಮವಾರ ವೈರಲ್‌ ಆದ ಬೆನ್ನಿಗೇ ಪೊಲೀಸರು  ಟ್ರಕ್‌ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವ್ಯಕ್ತಿಯೊಬ್ಬನ ಜೀವಕ್ಕೆ ಅಪಾಯವೊಡ್ಡಿದ ಆರೋಪವನ್ನು ಆತನ ಮೇಲೆ ಹೊರಿಸಲಾಗಿದೆ. ಪಂಜಾಬ್‌ನ ಮುಕ್ತ್‌ಸರ್‌ ಎಂಬಲ್ಲಿ ರವಿವಾರ ಈ ಘಟನೆ ನಡೆದಿದೆಯೆನ್ನಲಾಗಿದೆ.

ಧಾನ್ಯಗಳ ಸಾಗಾಟ ಕಾರ್ಮಿಕನಾಗಿದ್ದ ಭುರಾ aಲಿ ಎಂಬ ಯುವಕ ತಾನು ಕೆಲಸ ಮಾಡುತ್ತಿದ್ದ ಟ್ರಕ್‌ನಿಂದ ಎರಡು ಮೂಟೆ ಗೋಧಿ ಕದ್ದಿದ್ದಾನೆಂದು ಚಾಲಕ ಝೈಲ್‌ ಸಿಂಗ್‌ ಹೇಳಿಕೊಂಡು ಆತನನ್ನು ವಾಹನದ ಬಾನೆಟ್‌ಗೆ ಕಟ್ಟಿ ಹಾಕಿದ್ದ.

ಟ್ರಕ್‌ ಅನ್ನು ಅಬೋಹರ್‌ ರಸ್ತೆಯಿಂದ 1.5 ಕಿಮೀ ದೂರದಲ್ಲಿರುವ ಮುಕ್ತ್‌ಸರ್‌ ಪೊಲೀಸ್ ಠಾಣೆ ತನಕ ತೆಗೆದುಕೊಂಡು ಹೋಗಲಾಗಿತ್ತು. ವೀಡಿಯೋದಲ್ಲಿ ಕಾರ್ಮಿಕನ ಪಕ್ಕ ಚಾಲಕ ಕುಳಿತುಕೊಂಡಿದ್ದು ಕಾಣಿಸುತ್ತದೆ. ಆತ ಎರಡು ಚೀಲ ಗೋಧಿ ಕದ್ದಿರುವುದರಿಂದ ಠಾಣೆಗೆ ಕರೆದೊಯ್ಯಲಾಗುತ್ತಿದೆ ಎಂದು ಚಾಲಕ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಆರಂಭದಲ್ಲಿ ಮುಕ್ತ್‌ಸರ್‌ ಪೊಲೀಸರು ಕಾರ್ಮಿಕನ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದರೆ ಸೋಮವಾರ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ವಾಹನವನ್ನು ಠಾಣೆಗೆ ಕೊಂಡು ಹೋಗುವಾಗ ಚಾಲಕ ಝೈಲ್‌ ಸಿಂಗ್‌ ಕಾರ್ಮಿಕನ ಪಕ್ಕದಲ್ಲಿಯೇ ಇದ್ದರೆ ವಾಹನ ಬೇರೊಬ್ಬ ಚಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Full View

Similar News