ಅರುಣಾಚಲಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆ: ದೇಶವನ್ನು ಕೇಂದ್ರ ಕತ್ತಲೆಯಲ್ಲಿರಿಸಿದೆ ಎಂದ ಉವೈಸಿ

Update: 2022-12-13 08:52 GMT

ಹೊಸದಿಲ್ಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಶುಕ್ರವಾರ ಭಾರತ ಹಾಗೂ  ಚೀನಾ ಸೈನಿಕರ ನಡುವೆ ಘರ್ಷಣೆಯಾದ ವರದಿಗಳು ಹೊರಬಿದ್ದ ಬೆನ್ನಲ್ಲೇ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ Asaduddin Owaisi ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು, ಸರಕಾರವು ಹಲವು ದಿನಗಳ ತನಕ  ದೇಶವನ್ನು "ಕತ್ತಲೆ" ಯಲ್ಲಿ ಇರಿಸಿದೆ ಎಂದು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಸಂಸತ್ತಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿದರು.

ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯಲ್ಲಿ  ಎರಡೂ ಕಡೆಯ "ಕೆಲವು ಯೋಧರಿಗೆ" ಸಣ್ಣಪುಟ್ಟ ಗಾಯಗಳಾಗಿವೆ. ಎರಡೂ ಕಡೆಯವರು ತಕ್ಷಣವೇ ಪ್ರದೇಶದಿಂದ ನಿರ್ಗಮಿಸಿದ್ದಾರೆ ಎಂದು ಸೋಮವಾರ ಪ್ರಕಟನೆ  ತಿಳಿಸಿದೆ,

ಸೋಮವಾರ  ಈ ವಿಷಯದ ಕುರಿತು ಟ್ವೀಟಿಸಿರುವ ಲೋಕಸಭಾ ಸಂಸದ  ಉವೈಸಿ, "ಅರುಣಾಚಲ ಪ್ರದೇಶದಿಂದ ಬರುತ್ತಿರುವ ವರದಿಗಳು ಆತಂಕಕಾರಿ ಹಾಗೂ ಎಚ್ಚರಿಕೆ ನೀಡುವ ರೀತಿಯಲ್ಲಿದೆ. ಭಾರತ ಹಾಗೂ  ಚೀನಾ ಸೈನಿಕರ ನಡುವೆ ಭಾರಿ ಘರ್ಷಣೆ ನಡೆದಿದ್ದು, ಸರಕಾರ ದೇಶವನ್ನು ಹಲವು ದಿನ ಕತ್ತಲಲ್ಲಿಟ್ಟಿದೆ. ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಈ ಕುರಿತು  ಏಕೆ ತಿಳಿಸಲಿಲ್ಲ?'' ಎಂದು ಕೇಳಿದ್ದಾರೆ.

Similar News