ಡಿ.15ರಂದು ಮೂಡುಬೆಳ್ಳೆ ಲಯನ್ಸ್ ಕ್ಲಬ್‌ನ ಬೆಳ್ಳಿಹಬ್ಬದ ಸಂಭ್ರಮ
ಉಡುಪಿ, ಡಿ.13: ಮೂಡುಬೆಳ್ಳೆ ಲಯನ್ಸ್ ಕ್ಲಬ್ ಇದೇ ಡಿ.15ರಂದು ಬೆಳ್ಳಿಹಬ್ಬದ ಸಂಭ್ರಮವನ್ನು ಆಚರಿಸಲಿದೆ ಎಂದು ಕ್ಲಬ್‌ನ ಅಧ್ಯಕ್ಷ ನಿವೃತ್ತ ನೌಕಾದಳದ ಅಧಿಕಾರಿ ಕಮಡೋರ್ ಕಸ್ತಲಿನೋ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1997 ಡಿ.15ರಂದು ಪ್ರಾರಂಭಗೊಂಡ ಮೂಡುಬೆಳ್ಳೆ ಲಯನ್ಸ್ ಕ್ಲಬ್, 2002ರಲ್ಲಿ 20 ಸೆಂಟ್ಸ್‌ನ ಸ್ವಂತ ಸ್ಥಳದಲ್ಲಿ ಲಯನ್ಸ್ ಸೇವಾ ಭವನವನ್ನು ನಿರ್ಮಿಸಿದ್ದು ಊರಿನ ಸಮಾಜದ ವಿವಿಧ ಚಟುವಟಿಕೆಗಳಿಗೆ ನೀಡುತ್ತಿದೆ ಎಂದರು.
25 ವರ್ಷಗಳ ಸೇವಾ ವಿವರಗಳನ್ನು ನೀಡಿದ ಕ್ಲಬ್‌ನ ಕಾರ್ಯದರ್ಶಿ ದೇವದಾಸ ಹೆಬ್ಬಾರ್, ಆರೋಗ್ಯ ಸಂಬಂಧಿಸಿದಂತೆ ಉಚಿತ ದಂತ ಚಿಕಿತ್ಸಾ ಶಿಬಿರಗಳು, ಉಚಿತ ನೇತ್ರ ಚಿಕಿತ್ಸ ಶಿಬಿರಗಳು, ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳನ್ನು ಆಯೋಜಿಸಿದೆ. ಡಾ.ಬಿ.ಎಂ.ಹೆಗ್ಡೆ ಕೊಡಮಾಡಿದ ಆರು ಲಕ್ಷರೂ.ಗಳಲ್ಲಿ ಮೂಡುಬೆಳ್ಳೆ ಪರಿಸರದ 120 ಬಡಕುಟುಂಬಗಳಿಗೆ ಉಚಿತ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.
ಬೆಳ್ಳೆ ಸುತ್ತಮುತ್ತ ಮನೆ ಇಲ್ಲದವರಿಗೆ 14 ಮನೆಗಳನ್ನು ಲಯನ್ಸ್ ಕ್ಲಬ್ ನಿರ್ಮಿಸಿದೆ. ಹಲವು ಮನೆಗಳ ದುರಸ್ತಿ ಮಾಡಿಕೊಟ್ಟಿದೆ. 10 ಬಸ್ಸು ತಂಗುದಾಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ, ಶಾಲಾ ಬಿಸಿಯೂಟದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಮಳೆನೀರು ಕೊಯ್ಲು ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಬೆಳ್ಳಿಹಬ್ಬದ ಸಂದರ್ಭದಲ್ಲಿ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ 40 ಸೀಟುಗಳ ಶಾಲಾ ವಾಹನವೊಂದನ್ನು ಸಂತ ಲಾರೆನ್ಸ್ ಕನ್ನಡ ಶಾಲೆಗೆ ನೀಡುತಿದ್ದೇವೆ ಎಂದರು.
ಬೆಳ್ಳಿಹಬ್ಬದ ಕಾರ್ಯಕ್ರಮಗಳು ಡಿ.15ರ ಗುರುವಾರ ಸಂಜೆ 5:45ಕ್ಕೆ ಲಯನ್ಸ್ ಸೇವಾ ಭವನದಲ್ಲಿ ನಡೆಯಲಿದೆ. ಇದರಲ್ಲಿ ಲಯನ್ಸ್ ಜಿಲ್ಲೆ 1317ಸಿಯ ಗವರ್ನರ್ ಡಾ.ಎಂ.ಕೆ.ಭಟ್, ಉಡುಪಿ ಧರ್ಮಪ್ರಾಂತದ ಬಿಷಪ್ ಅ.ವಂ.ಜೆರಾಲ್ಡ್ ಐಸಾಕ್ ಲೋಬೊ, ಅಮೆರಿಕ ಚಿಕಾಗೋದ ಆಸ್ಟಿನ್ ಡಿಸೋಜ, ಡಾ.ನೇರಿ ಕರ್ನೇಲಿಯೊ, ಮಹಮ್ಮದ್ ಹನೀಫ್ ಮುಂತಾದವರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ಎಲಿಯಾಸ್ ಡಿಸೋಜ, ಡಾ.ಎಗ್ವಿನ್ ಡಿಸೋಜ ಉಪಸ್ಥಿತರಿದ್ದರು.