ಪಾಕಿಸ್ತಾನದ ಐಎಸ್‌ಐ ಜೊತೆ ನಂಟು: ಆರೋಪಿ ದೀಪಕ್ ಕಿಶೋರ್ ಭಾಯಿ ಸಾಲುಂಖೆ ಬಂಧನ
ಸೂರತ್: ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐಗೆ ಕಾರ್ಯ ನಿರ್ವಹಿಸುತ್ತಿದ್ದ ಹಾಗೂ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಸೂರತ್‌ನಿಂದ 33 ವರ್ಷದ ವ್ಯಕ್ತಿಯೋರ್ವನನ್ನು ಗುಜರಾತ್ ಪೊಲೀಸರು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಪುಣೆ ಮೂಲದ ದಕ್ಷಿಣ ಸೇನಾ ಕಮಾಂಡ್‌ನ ಸೇನಾ ಬೇಹುಗಾರಿಕೆ ನೀಡಿದ ಮಾಹಿತಿಯಂತೆ ಕಾರ್ಯ ಪ್ರವೃತ್ತರಾದ ಕೈಮ್ ಬ್ರಾಂಚ್‌ನ ಅಧಿಕಾರಿಗಳು ಆರೋಪಿ ದೀಪಕ್ ಕಿಶೋರ್ ಭಾಯಿ ಸಾಲುಂಖೆ(Deepak Kishore Bhai Salunkhe)ಯನ್ನು ಡೈಮಂಡ್ ಸಿಟಿಯಿಂದ ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸೂರತ್‌ನ ಭುವನೇಶ್ವರಿ ನಗರದ ನಿವಾಸಿಯಾಗಿರುವ ಸಾಲುಂಖೆ ‘ಸಾಯಿ ಫ್ಯಾಶನ್’ (Sai Fashion)ಎಂಬ ಹೆಸರಿನ ಅಂಗಡಿ ನಡೆಸುತ್ತಿದ್ದ.
‘‘ಐಎಸ್‌ಐ ಏಜೆಂಟ್ ಸಾಳುಂಕೆಯನ್ನು ಮುಂದಿನ ಪ್ರಕ್ರಿಯೆಗಾಗಿ ಗುಜರಾತ್ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ಗುಂಪಿಗೆ (SOG) ಹಸ್ತಾಂತರಿಸಲಾಗುತ್ತಿದೆೆ’’ ಎಂದು ಮೂಲಗಳು ತಿಳಿಸಿವೆ.
ನಿರ್ಣಾಯಕ ಮಾಹಿತಿಗೆ ಪ್ರತಿಯಾಗಿ ಭಾರತದಲ್ಲಿ ಸೇವಾ ನಿರತ ಅಧಿಕಾರಿಗಳು ಹಾಗೂ ನಾಗರಿಕರಿಗೆ ಹಣ ರವಾನಿಸುವ ವ್ಯವಸ್ಥೆಯನ್ನು ಸಾಲುಂಖೆ ನಿರ್ವಹಿಸುತ್ತಿದ್ದ.
‘‘ಆತ ಪಾಕಿಸ್ತಾನದ ಇಬ್ಬರು ಹ್ಯಾಂಡ್ಲರ್‌ಗಳಾದ ಹಮೀದ್ ಹಾಗೂ ಕಾಶಿಫ್ ಜೊತೆಗೆ ಸಂಪರ್ಕ ಇರಿಸಿಕೊಂಡಿದ್ದ. ಅವರೊಂದಿಗೆ ಅತಿ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ’’ ಎಂದು ಮೂಲಗಳು ತಿಳಿಸಿವೆ.