ಪಪ್ಪು ಯಾರು?: ಸರ್ಕಾರದ ಆರ್ಥಿಕ ನೀತಿ ಅಂಕಿಅಂಶ ಉಲ್ಲೇಖಿಸಿ ಕುಟುಕಿದ ಮಹುವಾ ಮೊಯಿತ್ರ
"ಬಿಜೆಪಿ ಅಧ್ಯಕ್ಷರಿಗೆ ತಮ್ಮ ರಾಜ್ಯದಲ್ಲೇ ಪಕ್ಷ ಗೆಲ್ಲಿಸಲು ಸಾಧ್ಯವಾಗಿಲ್ಲ"
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಅವರು ಕೈಗಾರಿಕಾ ಉತ್ಪಾದನೆಯ ಅಂಕಿಅಂಶಗಳನ್ನು ಉಲ್ಲೇಖಿಸಿ ಸರ್ಕಾರದ ಆರ್ಥಿಕ ಪ್ರಗತಿಯ ಹಕ್ಕುಗಳ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಮಹುವಾ ಮೊಯಿತ್ರಾ ಅವರು ʼಪ್ರತಿ ಫೆಬ್ರವರಿಯಲ್ಲಿ ಸರ್ಕಾರವು ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಎಲ್ಲರಿಗೂ ಗ್ಯಾಸ್ ಸಿಲಿಂಡರ್‌ಗಳು, ವಸತಿ ಮತ್ತು ವಿದ್ಯುತ್‌ನಂತಹ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡುತ್ತದೆ ಎಂದು ಭರವಸೆ ನೀಡುತ್ತದೆ, ಆದರೆ ಅವರು ಸಾರ್ವಜನಿಕರಿಗೆ ಸುಳ್ಳು ಹೇಳುತ್ತಿದ್ದಾರೆʼ ಎಂದು ಹೇಳಿದ್ದಾರೆ.
ಸರ್ಕಾರದ ಹೇಳಿಕೆಗಳನ್ನು ಸುಳ್ಳು ಎಂದು ಬಣ್ಣಿಸಿದ ಮಹುವಾ ಮೊಯಿತ್ರಾ, “ಸತ್ಯವು ಕುಂಟುತ್ತಾ ಎಂಟು ತಿಂಗಳ ನಂತರ ಡಿಸೆಂಬರ್‌ನಲ್ಲಿ ಬಂದು ತಲುಪಿದೆ. ಈಗ ಬಜೆಟ್ ಅಂದಾಜಿನ ಮೇಲೆ ಹೆಚ್ಚುವರಿಯಾಗಿ 3.26 ಲಕ್ಷ ಕೋಟಿ ರೂಪಾಯಿ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ” ಎಂದಿದ್ದಾರೆ.
2022-23ಕ್ಕೆ ಹೆಚ್ಚುವರಿ ಅನುದಾನದ ಬೇಡಿಕೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಹುವಾ ಮೊಯಿತ್ರಾ ಮೋದಿ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಮೋದಿ ಸರ್ಕಾರವು ಭಾರತದ ಅಭಿವೃದ್ಧಿಯ ಬಗ್ಗೆ ಸುಳ್ಳುಗಳನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಆರ್ಥಿಕತೆಯನ್ನು ನಿಯಂತ್ರಿಸಲು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.
“ಈ ಸರ್ಕಾರ ಮತ್ತು ಆಡಳಿತ ಪಕ್ಷ ಪಪ್ಪು ಎಂಬ ಪದವನ್ನು ಹುಟ್ಟುಹಾಕಿದೆ. ನೀವು (ಬಿಜೆಪಿ) ಅದನ್ನು ನಿಂದಿಸಲು ಮತ್ತು ತೀವ್ರ ಅಸಮರ್ಥತೆಯನ್ನು ಸೂಚಿಸಲು ಬಳಸುತ್ತೀರಿ. ಆದರೆ ಅಂಕಿಅಂಶಗಳು ನಮಗೆ ನಿಜವಾದ ಪಪ್ಪು ಯಾರು ಎಂದು ಹೇಳುತ್ತವೆ?” ಎಂದು ಮೊಯಿತ್ರಾ ಹೇಳಿದ್ದಾರೆ.
ಇದಲ್ಲದೇ ಬಿಜೆಪಿಯ ಹಿಮಾಚಲದ ಸೋಲಿನ ಬಗ್ಗೆ ವ್ಯಂಗ್ಯವಾಡಿದ ಅವರು, ಬಿಜೆಪಿ ಅಧ್ಯಕ್ಷರು ಚುನಾವಣೆಯಲ್ಲಿ ತಮ್ಮ ರಾಜ್ಯವನ್ನು ಉಳಿಸಲು ಸಾಧ್ಯವಾಗಲಿಲ್ಲ, ಹಾಗಾದರೆ ಈಗ ಪಪ್ಪು ಯಾರು? ಎಂದು ಕುಟುಕಿದ್ದಾರೆ.