ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ಅಂಕಿಅಂಶ ಈಡಿ ಹೊಂದಿಲ್ಲ: ಲೋಕಸಭೆಯಲ್ಲಿ ಕೇಂದ್ರ ಸರಕಾರ ಹೇಳಿಕೆ

Update: 2022-12-13 18:17 GMT

ಹೊಸದಿಲ್ಲಿ, ಡಿ. 13: ಸಂಸದರು ಮತ್ತು ಶಾಸಕರ ವಿರುದ್ಧ ತಾನು ದಾಖಲಿಸುವ ಮೊಕದ್ದಮೆಗಳ ಸಂಖ್ಯೆಗೆ ಸಂಬಂಧಿಸಿ ಅನುಷ್ಠಾನ ನಿರ್ದೇಶನಾಲಯವು (ED) ಯಾವುದೇ ದಾಖಲೆಗಳನ್ನು ಇಡುವುದಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಲೋಕಸಭೆಗೆ ತಿಳಿಸಿದೆ.

‘‘ಅನುಷ್ಠಾನ ನಿರ್ದೇಶನಾಲಯವು ವಿಶ್ವಾಸಾರ್ಹ ಪುರಾವೆಗಳ ಆಧಾರದಲ್ಲಿ ತನಿಖೆಗಾಗಿ ಪ್ರಕರಣಗಳನ್ನು ಎತ್ತಿಕೊಳ್ಳುತ್ತದೆ. ಅದು ಪ್ರಕರಣಗಳನ್ನು ದಾಖಲಿಸುವಾಗ ಆರೋಪಿಗಳ ರಾಜಕೀಯ ಒಲವು ಅಥವಾ ಸ್ಥಾನಮಾನದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ’’ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಹೇಳಿದರು. ತೃಣಮೂಲ ಕಾಂಗ್ರೆಸ್ ಸಂಸದೆ ಮಾಲಾ ರಾಯ್‌ಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಅನುಷ್ಠಾನ ನಿರ್ದೇಶನಾಲಯವು ಶಾಸಕರು ಮತ್ತು ಸಂಸದರ ವಿರುದ್ಧ ದಾಖಲಿಸಿದ ಮೊಕದ್ದಮೆಗಳ ರಾಜ್ಯವಾರು ಅಂಕಿಅಂಶಗಳನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಕೋರಿದ್ದರು. ಆದರೆ, ಕಳೆದ ಐದು ವರ್ಷಗಳಲ್ಲಿ ಸಂಸದರು ಮತ್ತು ಶಾಸಕರ ವಿರುದ್ಧ ಸಿಬಿಐ ಹೂಡಿದ ಮೊಕದ್ದಮೆಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಕೇಂದ್ರ ಸರಕಾರ ಡಿಸೆಂಬರ್ 7ರಂದು ನೀಡಿತ್ತು. ಆ ಪ್ರಶ್ನೆಯನ್ನೂ ಮಾಲಾ ರಾಯ್ ಅವರೇ ಕೇಳಿದ್ದರು. ಅದಕ್ಕೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, 2017 ಮತ್ತು 2021ರ ನಡುವಿನ ಅವಧಿಯಲ್ಲಿ ಸಿಬಿಐ 56 ಸಂಸದರು ಮತ್ತು ಶಾಸಕರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದೆ ಎಂದು ಹೇಳಿದ್ದರು.

Similar News