ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಸಂಗ್ರಹವಾಗಿರುವ ನಿಧಿಯನ್ನು ಮರಳಿಸಲು ಮೂರು ರಾಜ್ಯಗಳ ಆಗ್ರಹ: ಕೇಂದ್ರ ನಕಾರ

Update: 2022-12-14 09:14 GMT

ಹೊಸ ದಿಲ್ಲಿ: ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೆ ತರಲು ಮುಂದಾಗಿರುವ ರಾಜಸ್ತಾನ, ಛತ್ತೀಸ್‌ಗಢ ಹಾಗೂ ಜಾರ್ಖಂಡ್ ರಾಜ್ಯಗಳು ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಸಂಗ್ರಹವಾಗಿರುವ ನಿಧಿಯನ್ನು (National Pension System funds) ರಾಜ್ಯಗಳಿಗೆ ಮರಳಿಸುವಂತೆ ಮಾಡಿರುವ ಆಗ್ರಹವನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ತಳ್ಳಿ ಹಾಕಿದೆ ಎಂದು timesofindia ವರದಿ ಮಾಡಿದೆ.

ವಿರೋಧ ಪಕ್ಷಗಳ ಆಡಳಿತವಿರುವ ಮೇಲಿನ ಮೂರು ರಾಜ್ಯಗಳು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದಾಗಿ ಭರವಸೆ ನೀಡಿವೆ. ಈ ಯೋಜನೆಯನ್ವಯ ಸರ್ಕಾರಿ ನೌಕರರು ಪಡೆದಿದ್ದ ಕೊನೆಯ ಸಂಬಳದ ಶೇ. 50ರಷ್ಟು ಭಾಗವನ್ನು ಸರ್ಕಾರ ಪಿಂಚಣಿ ರೂಪದಲ್ಲಿ ಮರಳಿಸಬೇಕಾಗುತ್ತದೆ. ಆದರೆ, ರಾಷ್ಟ್ರೀಯ ಪಿಂಚಣಿ ಯೋಜನೆಯನ್ವಯ ನೌಕರರು ತಮ್ಮ ಸಂಬಳದ ಶೇ. 10ರಷ್ಟು ಕೊಡುಗೆ ನೀಡಿದರೆ, ಸರ್ಕಾರವೂ ಅಷ್ಟೇ ಪ್ರಮಾಣದ ಕೊಡುಗೆ ನೀಡುತ್ತದೆ. ನಂತರ ಈ ನಿಧಿಯನ್ನು ನಿಧಿ ವ್ಯವಸ್ಥಾಪಕರಿಗೆ ವರ್ಗಾಯಿಸಲಾಗುತ್ತದೆ. ನಿವೃತ್ತಿಯ ನಂತರ ಈ ತುರ್ತು ನಿಧಿಯನ್ನು ವಾರ್ಷಿಕ ವಿಮೆಯನ್ನು ಖರೀದಿಸಲು ನೌಕರರಿಗೆ ಮರಳಿಸಲಾಗುತ್ತದೆ.

ಈ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ (BJP) ಸದಸ್ಯ ಸುಶೀಲ್ ಮೋದಿ (Sushil Modi) ಅವರಿಗೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಭಾಗವತ್ ಕಾರಡ್, ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಸಂಗ್ರಹವಾಗಿರುವ ನಿಧಿಯನ್ನು ಮರಳಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ನೀಡಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಪಿಂಚಣಿ ನಿಧಿಯನ್ನು ಮರಳಿಸಬೇಕು ಎಂಬ ಆಗ್ರಹವನ್ನು ತಳ್ಳಿ ಹಾಕಿದ್ದರು. ಈ ಆಗ್ರಹವು ಹಿಮಾಚಲ ಪ್ರದೇಶದಿಂದಲೂ ಇದ್ದು, ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕೂಡಾ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದಾಗಿ ಭರವಸೆ ನೀಡಿದೆ.

ಒಂದು ವೇಳೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಸಂಗ್ರಹವಾಗಿರುವ ನಿಧಿಯನ್ನು ಕೇಂದ್ರ ಸರ್ಕಾರ ಈ ರಾಜ್ಯಗಳಿಗೆ ಮರಳಿಸದಿದ್ದರೆ ಹಳೆಯ ಪಿಂಚಣಿ ಯೋಜನೆಯನ್ವಯ ಈ ರಾಜ್ಯಗಳು 16-17 ವರ್ಷ ಅವಧಿಯ ನೌಕರರ ಪಿಂಚಣಿಯನ್ನು ಭರಿಸಬೇಕಾಗುತ್ತದೆ. ಇಲ್ಲವಾದರೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 2005ರಲ್ಲಿ ರಾಜ್ಯಗಳಿಗೂ ವಿಸ್ತರಿಸಲಾಗಿದ್ದ ಅಸ್ತಿತ್ವದಲ್ಲಿರುವ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕಾಗುತ್ತದೆ.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ, 2004ರ ನಂತರ ನೇಮಕಗೊಳ್ಳುವ ನೌಕರರನ್ನು ಈ ಯೋಜನೆ ವ್ಯಾಪ್ತಿಗೆ ತರಲಾಗಿತ್ತು. ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಈ ಯೋಜನೆಯನ್ನು ರಾಜ್ಯಗಳಿಗೂ ವಿಸ್ತರಿಸಿದ್ದರು. ಈ ಯೋಜನೆಗೆ ಸೇರ್ಪಡೆಯಾಗಲು ಕೆಲವು ರಾಜ್ಯಗಳು ಮೊದಮೊದಲು ಹಿಂದೇಟು ಹಾಕಿದ್ದವು.

ಇದನ್ನೂ ಓದಿ: ಪದೇ ಪದೇ ಹೇಳಿ ಕಿರಿಕಿರಿ ಮಾಡಬೇಡಿ: ಬಿಲ್ಕಿಸ್ ಬಾನು ಪ್ರಕರಣದ ಶೀಘ್ರ ವಿಚಾರಣೆ ಮನವಿಗಳಿಗೆ ಸುಪ್ರೀಂ ಪ್ರತಿಕ್ರಿಯೆ

Similar News