×
Ad

ಗಾಯಕ ಮೂಸೆವಾಲಾ ಹತ್ಯಾ ಪ್ರಕರಣ ಭೇದಿಸಿದ ವಿಶೇಷ ದಳದ 12 ಮಂದಿ ಪೊಲೀಸರಿಗೆ 24 ಗಂಟೆ ಭದ್ರತೆ

Update: 2022-12-14 16:24 IST

ಹೊಸದಿಲ್ಲಿ: ಪಂಜಾಬ್ (Punjab) ಗಾಯಕ ಸಿಂಧು ಮೂಸೆವಾಲಾ (Singer Moosewala) ಹತ್ಯಾ ಪ್ರಕರಣ ಭೇದಿಸಿದ ವಿಶೇಷ ದಳದ 12 ಮಂದಿ ಪೊಲೀಸ್ ಅಧಿಕಾರಿಗಳಿಗೆ ಕೆನಡಾ ಮೂಲದ ಭೂಗತ ದೊರೆ ಲಖ್ಬೀರ್ ಸಿಂಗ್ ಲಾಂಡಾ ಜೀವ ಬೆದರಿಕೆ ಒಡ್ಡಿದ್ದು, ಅವರಿಗೆ ದಿನದ 24 ಗಂಟೆ ಭದ್ರತೆ ಒದಗಿಸಲಾಗಿದೆ ಎಂದು indianexpress.com ವರದಿ ಮಾಡಿದೆ.

ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ವಿಶೇಷ ದಳದ ಪೊಲೀಸ್ ಆಯುಕ್ತರಾದ ಹರ್ಗೋಬಿಂದರ್ ಸಿಂಗ್ ಧಾಲಿವಾಲ್ ಹಾಗೂ ಉಪ ಪೊಲೀಸ್ ಆಯುಕ್ತರಾದ ಮನೀಶಿ ಚಂದ್ರ, ರಾಜೀವ್ ರಂಜನ್ ಅವರಿಗೆ ವೈ ಶ್ರೇಣಿಯ ಭದ್ರತೆ ಒದಗಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದಾರೆ. ಈ ಪೊಲೀಸ್ ಅಧಿಕಾರಿಗಳ ನಿವಾಸದ ಬಳಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು indianexpress.com ವರದಿ ಮಾಡಿದೆ.

ವಿಶೇಷ ದಳವು ದಿಲ್ಲಿ ಪೊಲೀಸ್ ಇಲಾಖೆಯ ಭಯೋತ್ಪಾದನಾ ನಿಗ್ರಹ ಘಟಕವಾಗಿದ್ದು, ಸದ್ಯ ಈ ಘಟಕದ ಎರಡು ದಳಗಳ ನೇತೃತ್ವವನ್ನು ರಂಜನ್ ವಹಿಸಿದ್ದಾರೆ. ಮನೀಶಿ ಚಂದ್ರ ಅವರು ದೆಹಲಿ ಪೊಲೀಸ್ ಆಯುಕ್ತರ ಸಿಬ್ಬಂದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

"ಇದರೊಂದಿಗೆ ನಾಲ್ಕು ಮಂದಿ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಐವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೂ ಭದ್ರತೆಯನ್ನು ಅನುಮೋದಿಸಲಾಗಿದ್ದು, ಸಶಸ್ತ್ರ ಪೊಲೀಸ್ ಕಮಾಂಡೊ ಒಬ್ಬರು ದಿನಪೂರ್ತಿ ಅವರಿಗೆ ಭದ್ರತೆ ನೀಡಲಿದ್ದಾರೆ" ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ವೈ ಶ್ರೇಣಿಯ ಭದ್ರತೆಯನ್ನು ಸಂಪುಟ ದರ್ಜೆಯ ಸಚಿವರು, ಮುಖ್ಯಮಂತ್ರಿಗಳು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರು, ಹಿರಿಯ ರಾಜಕಾರಣಿ ಹಾಗೂ ಅಧಿಕಾರಿಗಳಿಗೆ ಮಾತ್ರ ಒದಗಿಸಲಾಗುತ್ತದೆ.

ಕಳೆದ ತಿಂಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಲಾಂಡಾ, ಮೂಸೆವಾಲಾ ಹತ್ಯಾ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದ. ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ದಿಲ್ಲಿ ಪೊಲೀಸ್ ಇಲಾಖೆ, ಸಂಬಂಧಿಸಿತ ಪೊಲೀಸ್ ಅಧಿಕಾರಿಗಳಿಗೆ ದಿನಪೂರ್ತಿ ಭದ್ರತೆ ಒದಗಿಸುವ ಪ್ರಸ್ತಾವವನ್ನು ಅನುಮೋದಿಸಿದೆ.

ಮೂಲತಃ ತರ್ನ್ ತರನ್ ಜಿಲ್ಲೆಯವನಾದ ಲಾಂಡಾ, 2017ರಿಂದ ಕೆನಡಾದಲ್ಲಿ ವಾಸವಿದ್ದಾನೆ. ಈತ  ಪಾಕಿಸ್ತಾನದ ಆಸ್ಪತ್ರೆಯೊಂದರಲ್ಲಿ ಅಸು ನೀಗಿದ್ದಾನೆ ಎಂದು ಹೇಳಲಾಗಿರುವ ಹರ್ವಿಂದರ್ ರಿಂಡಾನ ಸಹಚನಾಗಿದ್ದು, ರಿಂಡಾ, ಬಿಕೆಐ ಮುಖ್ಯಸ್ಥ ವಾಧ್ವಾ ಸಿಂಗ್ ಹಾಗೂ ಐಎಸ್‌ಐನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕವಯಿತ್ರಿಯ ಫೋಟೋಗಳ ದುರ್ಬಳಕೆ: ದೂರಿನ ಕುರಿತು ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ ಸಂತ್ರಸ್ತೆ

Similar News