ಭಾರತ-ಚೀನಾ ಗಡಿ ಸಂಘರ್ಷ ಕುರಿತು ಚರ್ಚೆಗೆ ನಕಾರ: ಒಗ್ಗಟ್ಟಿನಿಂದ ಸಂಸತ್ತಿನಿಂದ ಹೊರನಡೆದ ವಿಪಕ್ಷಗಳು

Update: 2022-12-14 11:54 GMT

ಹೊಸದಿಲ್ಲಿ: ಭಾರತ-ಚೀನಾ ಗಡಿ ಭಾಗದಲ್ಲಿ ಎರಡೂ ಕಡೆಗಳ ಸೈನಿಕರ ನಡುವೆ ನಡೆದ ಘರ್ಷಣೆ  ಹಾಗೂ ಅಲ್ಲಿನ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ (Congress) ನಾಯಕಿ ಸೋನಿಯಾ ಗಾಂಧಿ (Sonia Gandhi) ನೇತೃತ್ವದಲ್ಲಿ ಎಲ್ಲಾ ವಿಪಕ್ಷಗಳೂ ಇಂದು ಸಭಾತ್ಯಾಗ ನಡೆಸಿ ಈ ಮಹತ್ವದ ವಿಚಾರದಲ್ಲಿ ತಮ್ಮ ಒಗ್ಗಟ್ಟು ಪ್ರದರ್ಶಿಸಿವೆ.

ಗಡಿ ಭಾಗದಲ್ಲಿ ಚೀನಾದ ಅತಿಕ್ರಮಣ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಚರ್ಚೆಗೆ ವಿಪಕ್ಷಗಳು ಬಯಸಿವೆ ಎಂದು ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸದನದಲ್ಲಿ ಹೇಳಿದರಲ್ಲದೆ ವಿಪಕ್ಷಗಳು ದೇಶ ಮತ್ತು ಸೇನೆಯ ಬೆಂಬಲಕ್ಕಿವೆ ಎಂದಿದ್ದರು. ಆದರೆ ಉಪಸಭಾಪತಿ ಹರಿವಂಶ್ ಅವರು ಈ ಕುರಿತು ಯಾವುದೇ ನೋಟಿಸ್ ಇಲ್ಲ ಹಾಗೂ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರಲ್ಲದೆ ಇತರ ವಿಚಾರಗಳ ಚರ್ಚೆ ಆರಂಭಿಸುವಂತೆ ಸೂಚಿಸಿದರು.

ಆದರೆ ಖರ್ಗೆ ತಮ್ಮ ಮಾತುಗಳನ್ನು ಮುಂದುವರಿಸುತ್ತಿದ್ದಂತೆಯೇ ಅವರ ಮೈಕ್ ಅನ್ನು ಆಫ್ ಮಾಡಲಾಯಿತು.

ಇದರ ಬೆನ್ನಲ್ಲೇ ವಿಪಕ್ಷಗಳ ಸಂಸದರು ಕೆಲ ಹೊತ್ತು ಘೋಷಣೆಗಳನ್ನು ಕೂಗಿದರೆ ನಂತರ ಸಭಾತ್ಯಾಗ ನಡೆಸಿದರು. ಕಾಂಗ್ರೆಸ್ ಪಕ್ಷದೊಂದಿಗೆ ಎಡ ಪಕ್ಷಗಳು, TMC, NCP, RJD, SP, JMM ಮತ್ತು ಶಿವಸೇನೆ ಸಂಸದರ ಸಹಿತ 18 ಪಕ್ಷಗಳ ಸಂಸದರು ಹೊರನಡೆದರು.

ಇದಕ್ಕೂ ಮೊದಲು ಗಡಿ ವಿಚಾರ ಚರ್ಚೆಗೆ ಸರಕಾರದ ಮೇಲೆ ಒತ್ತಡ ಹೇರುವ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದ ಸಭೆಗೆ ಆಮ್ ಆದ್ಮಿ ಪಕ್ಷ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿಯ ಸಂಸದರೂ ಭಾಗವಹಿಸಿ ಅಚ್ಚರಿ ಮೂಡಿಸಿದರು.

Similar News