×
Ad

ಮಹಾರಾಷ್ಟ್ರ: ಅಂತರ್‌ಜಾತಿ, ಅಂತರ್‌ಧರ್ಮೀಯ ವಿವಾಹಿತರ ಮಾಹಿತಿ ಸಂಗ್ರಹಕ್ಕೆ ಸಮಿತಿ ರಚನೆ

Update: 2022-12-14 21:06 IST

ಮುಂಬೈ,ಡಿ.14: ಅಂತರ್ ಧರ್ಮೀಯ ಹಾಗೂ ಅಂತರ್‌ಜಾತೀಯ ವಿವಾಹವಾದ ದಂಪತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮಹಾರಾಷ್ಟ್ರ ಸರಕಾರವು ಸಮಿತಿಯೊಂದನ್ನು ರಚಿಸಿದೆ. ಅಂತರ್‌ಜಾತೀಯ/ಅಂತರ್‌ಧರ್ಮೀಯ(Intercaste/Interfaith) ವಿವಾಹವಾದ ಮಹಿಳೆಯರು ತಮ್ಮ ಕುಟುಂಬಿಕರಿಂದ ತ್ಯಜಿಸಲ್ಪಟ್ಟಿದ್ದಾರೆಯೇ ಎಂಬುದರ ಬಗ್ಗೆಯೂ ಸಮಿತಿ ವಿವರಗಳನ್ನು ಕಲೆ ಹಾಕಲಿದೆ. ಈ ಸಮಿತಿಯಲ್ಲಿ ಸರಕಾರದ ಹಾಗೂ ಸರಕಾರೇತರ ಕ್ಷೇತ್ರಗಳಿಗೆ ಸೇರಿದ 13 ಮಂದಿ ಸದಸ್ಯರಿರುವರು ಎಂದು  ವರದಿಯಾಗಿದೆ.

ಮಹಾರಾಷ್ಟ್ರ ಸರಕಾರದ ಮಹಿಳಾ ಹಾಗೂ ಶಿಶು ಕಲ್ಯಾಣ ಇಲಾಖೆಯು ಮಂಗಳವಾರ ಜಾರಿಗೊಳಿಸಿದ ನಿರ್ಣಯವೊಂದು ಅಂತರ್‌ಜಾತೀಯ ಹಾಗೂಅಂತರ್‌ಧರ್ಮೀಯ ವಿವಾಹ- ಕೌಟುಂಬಿಕ ಸಮನ್ವಯ ಸಮಿತಿ (ರಾಜ್ಯಮಟ್ಟ)ಯ ಅಧ್ಯಕ್ಷತೆಯನ್ನು ಮಹಾರಾಷ್ಟ್ರ ಸಚಿವ ಮಂಗಲ್ ಪ್ರತಾಪ್(Mangal Pratap) ವಹಿಸಲಿದ್ದಾರೆಂದು ತಿಳಿಸಿದೆ.

ಈ ಸಮಿತಿಯು ನಿಯಮಿತವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಲಿದೆ ಹಾಗೂ ಕುಟುಂಬದವರನ್ನು ತೊರೆದು ಹೋದವರು ಸೇರಿದಂತೆ ದಾಖಲಾಗದೆ ಇರುವ ಅಂತರ್‌ಧರ್ಮೀಯ ಹಾಗೂ ಅಂತರ್‌ಜಾತೀಯ ವಿವಾಹಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಿರುವರು ಎಂದು ನಿರ್ಣಯ ತಿಳಿಸಿದೆ.

ಸಮಿತಿಯ ರಚನೆಯನು ಎನ್‌ಸಿಪಿ ಪಕ್ಷವು ತೀವ್ರವಾಗಿ ವಿರೋಧಿಸಿದ್ದು, ಇದೊಂದು ಅತ್ಯಂತ ಪ್ರತಿಗಾಮಿ ನಡೆಯೆಂದು ಖಂಡಿಸಿದೆ. ಜನರ ವೈಯಕ್ತಿಕ ಬದುಕಿನ ಗೂಢಚಾರಿಕೆ ನಡೆಸಲು ಏಕನಾಥ ಶಿಂಧೆ ನೇತೃತ್ವದ ಸರಕಾರಕ್ಕೆ ಯಾವುದೇ ಹಕ್ಕಿಲ್ಲವೆಂದು ಅದು ಹೇಳಿದೆ.

‘‘ದಿಲ್ಲಿಯಲ್ಲಿ ವರದಿಯಾದಂತಹ ಶ್ರದ್ಧಾ ವಾಲ್ಕರ್‌ರ ಬರ್ಬರ ಹತ್ಯೆಯಂತಹ ಪ್ರಕರಣಗಳು ಮತ್ತೊಮ್ಮೆ ಸಂಭವಿಸದಂತೆ ನೋಡಿಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಸಮಿತಿಯ ಅಧ್ಯಕ್ಷತೆ ವಹಿಸಿರುವ ಸಚಿವ ಮಂಗಲ್ ಪ್ರತಾಪ್ ಲೋಧಾ ತಿಳಿಸಿದ್ದಾರೆ.

Similar News