×
Ad

ಹೊಲದಲ್ಲಿ ಅಪರಿಚಿತ ಮಹಿಳೆಯ ತುಂಡರಿಸಿದ ಮೃತದೇಹ ಪತ್ತೆ

Update: 2022-12-14 21:48 IST

 ರೆವಾರಿ (ಹರ್ಯಾಣ), ಡಿ. 14: ಅಪರಿಚಿತ ಮಹಿಳೆಯ ತುಂಡರಿಸಿದ ಮೃತದೇಹ ದಿಲ್ಲಿ-ಜೈಪುರ(Delhi-Jaipur) ಹೆದ್ದಾರಿಯ ಕಸೋಲಾ ಪ್ಲೈಓವರ್ ಸಮೀಪದ ಹೊಲದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ರೈತನೋರ್ವನ ಹೊಲದಲ್ಲಿ ನಿನ್ನೆ ರಾತ್ರಿ ಮಹಿಳೆಯ ರುಂಡ ಹಾಗೂ ಮುಂಡ ಪತ್ತೆಯಾಗಿದೆ. ಮೃತದೇಹದ ಕೈ ಹಾಗೂ ಕಾಲುಗಳನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಸಲಾಗಿತ್ತು. ಮಹಿಳೆಯ ಹತ್ಯೆ ನಡೆಸಿ 10 ದಿನಗಳಾಗಿರಬಹುದು. ಆದುದರಿಂದ ಅದು ಭಾಗಶಃ ಕೊಳೆತಿದೆ ಎಂದು ಅವರು ತಿಳಿಸಿದ್ದಾರೆ.

‘‘ನಾನು ಮಂಗಳವಾರ ರಾತ್ರಿ 9 ಗಂಟೆಗೆ ಸಾಸಿವೆ ಹೊಲಕ್ಕೆ ಹೋದ ಸಂದರ್ಭ ಕಪ್ಪು ಟ್ರಾಲಿ ಕಂಡು ಬಂತು. ನಾಯಿಗಳು ಅದರ ಸುತ್ತ ಸುಳಿದಾಡುತ್ತಿದ್ದವು’’ ಎಂದು ಅಸಲ್ವಾಸ್ ಗ್ರಾಮದ ರೈತ ರಾಮ್‌ಪಾಲ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ‘‘ನಾನು ಬ್ಯಾಗ್‌ನ ಸಮೀಪ ತೆರಳಿದಾಗ ದುರ್ವಾಸನೆ ಬರುತ್ತಿತ್ತು. ನಾನು ಎಚ್ಚರಿಕೆಯಿಂದ ಬ್ಯಾಗ್ ಅನ್ನು ಗಮನಿಸಿದೆ. 

ಅದರ ಒಳಗೆ ಕೈ ಹಾಗೂ ಕಾಲುಗಳು ಕಂಡು ಬಂದುವು. ಬ್ಯಾಗ್‌ನಿಂದ ಸ್ಪಲ್ಪ ದೂರದಲ್ಲಿ ಮಹಿಳೆಯರ ರುಂಡ ಮತ್ತು ಮುಂಡ ಕಂಡು ಬಂದುವು’’ ಎಂದು ಅವರು ತಿಳಿಸಿದ್ದಾರೆ. ‘‘ನಾನು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದೆ. ಕೆಲವು ವ್ಯಕ್ತಿಗಳು ಮಹಿಳೆಯನ್ನು ಹತ್ಯೆಗೈದು ಸಾಕ್ಷಿ ನಾಶ ಮಾಡಲು ಮೃತದೇಹವನ್ನು ಇಲ್ಲಿ ತಂದು ಎಸೆದಂತೆ ಕಾಣುತ್ತಿದೆ’’ ಎಂದು ರಾಮ್‌ಪಾಲ್ ದೂರಿನಲ್ಲಿ ಹೇಳಿದ್ದಾರೆ.

 ಮಾಹಿತಿ ದೊರೆತ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಮೃತದೇಹದ ಭಾಗಗಳನ್ನು ಸಂಗ್ರಹಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಕಸೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Similar News