×
Ad

ಕೇಂದ್ರ ಸರಕಾರದ ಇಲಾಖೆಗಳಲ್ಲಿ 9 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ

Update: 2022-12-14 21:59 IST

 ಹೊಸದಿಲ್ಲಿ, ಡಿ. 14: ಕೇಂದ್ರ ಸರಕಾರದ ಹಲವು ಸಚಿವಾಲಯ/ ಇಲಾಖೆಗಳಲ್ಲಿ ಸುಮಾರು 9.79  ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಬುಧವಾರ ಲೋಕಸಭೆಗೆ ಮಾಹಿತಿ ನೀಡಲಾಯಿತು. ವೆಚ್ಚ ವಿಭಾಗದ ಪಾವತಿ ಸಂಶೋಧನಾ ಘಟಕದ ವಾರ್ಷಿಕ ವರದಿಯ ಪ್ರಕಾರ ಕೇಂದ್ರ ಸರಕಾರದ ವಿವಿಧ ಸಚಿವಾಲಯ/ಇಲಾಖೆಗಳಲ್ಲಿ 2021 ಮಾರ್ಚ್ 1ರ ವರೆಗೆ 9,79,327 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರದ ಸಹಾಯಕ ಸಚಿವ ಜಿತೇಂದ್ರ ಸಿಂಗ್(Jitendra Singh) ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

‘‘ಕೇಂದ್ರ ಸರಕಾರದ ವಿವಿಧ ಸಚಿವಾಲಯ/ಇಲಾಖೆ/ಸಂಸ್ಥೆಗಳಲ್ಲಿ ಖಾಲಿ ಹುದ್ದೆ ಸೃಷ್ಟಿಯಾಗುವುದು ಹಾಗೂ ಅವಶ್ಯಕತೆಗೆ ಅನುಗುಣವಾಗಿ ಭರ್ತಿ ಮಾಡುವುದು ನಿರಂತರ ಪ್ರಕ್ರಿಯೆ’’ ಎಂದು ಅವರು ಹೇಳಿದರು. ಖಾಲಿ ಇರುವ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡುವಂತೆ ಸಚಿವಾಲಯ/ಇಲಾಖೆಗಳಿಗೆ ಸರಕಾರ ಈಗಾಗಲೇ ಸೂಚನೆಗಳನ್ನು ನೀಡಿದೆ ಎಂದು ಸಿಂಗ್ ಅವರು ತಿಳಿಸಿದರು.

ಇನ್ನಷ್ಟು ಉದ್ಯೋಗಗಳನ್ನು ಸೃಷ್ಟಿಸಲು, ಯುವಕರ ಸಬಲೀಕರಣಕ್ಕೆ ಅರ್ಥವತ್ತಾದ ಅವಕಾಶಗಳನ್ನು ಒದಗಿಸಲು ಹಾಗೂ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಳ್ಳುವಲ್ಲಿ ಕೇಂದ್ರ ಸರಕಾರ ಆಯೋಜಿಸುತ್ತಿರುವ ರೋಜ್‌ಗಾರ್ ಮೇಳಗಳು ವೇಗವರ್ಧಕದಂತೆ ವರ್ತಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಇನ್ನೊಂದು ಪ್ರತಿಕ್ರಿಯೆಯಲ್ಲಿ ಸಚಿವರು, ಐಎಎಸ್ ಅಧಿಕಾರಿಗಳ 1,472 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ. 2022ರ ಐಎಎಸ್ ಹುದ್ದೆಗಳ ಪಟ್ಟಿಯ ಪ್ರಕಾರ ರಾಜ್ಯವಾರು ಮಂಜೂರು ಮಾಡಲಾದ ಹುದ್ದೆಗಳು ಹಾಗೂ ಹುದ್ದೆಯಲ್ಲಿರುವ ಅಧಿಕಾರಿಗಳ ಸಂಖ್ಯೆ ಕ್ರಮವಾಗಿ 6,789 ಹಾಗೂ 5,317 ಎಂದು ಅವರು ತಿಳಿಸಿದ್ದಾರೆ. ಸಿಬಿಐಯಲ್ಲಿ 1,673 ಹುದ್ದೆಗಳು ಖಾಲಿ ಇವೆ ಎಂದು ಕೂಡಾ ಅವರು ತಿಳಿಸಿದರು.

Similar News