'ಸ್ಟ್ಯಾನ್ ಸ್ವಾಮಿ ವಿರುದ್ಧ ಕಂಪ್ಯೂಟರ್‌ನಲ್ಲಿ ದಾಖಲೆ ಅಳವಡಿಸಿರುವುದು ನ್ಯಾಯ ವ್ಯವಸ್ಥೆಗೆ ಕಳಂಕ'
ರಾಜಕಾರಣಿಗಳು, ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರ ಪ್ರತಿಪಾದನೆ
ಹೊಸದಿಲ್ಲಿ, ಡಿ. 14: ಬುಡಕಟ್ಟುಗಳ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ (stan swamy)ಅವರ ಕಂಪ್ಯೂಟರ್‌ನಲ್ಲಿ ಹ್ಯಾಕರ್‌ಗಳು ದೋಷಾರೋಪಣೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಅಳವಡಿಸಿದ್ದಾರೆ ಎಂದು ಅಮೆರಿಕದ ಡಿಜಿಟಲ್ ವಿಧಿ ವಿಜ್ಞಾನ ಸಂಸ್ಥೆ ‘ಆರ್ಸೆನಿಕ್ ಕನ್ಸೆಲ್ಟೆನ್ಸಿ’ ವರದಿ ನೀಡಿದ ಕೆಲವು ಗಂಟೆಗಳ ಬಳಿಕ ಹಲವು ರಾಜಕಾರಣಿಗಳು, ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ಹಾಗೂ ಸಾಮಾಜಿಕ ಸಂಘಟನೆಗಳ ಇದನ್ನು ಮಂಗಳವಾರ ಖಂಡಿಸಿವೆ.
ಅಲ್ಲದೆ, ಇದು ನ್ಯಾಯ ವ್ಯವಸ್ಥೆಗೆ ಕಳಂಕ ಎಂದು ವ್ಯಾಖ್ಯಾನಿಸಿವೆ. ಇದು ಪ್ರಜಾಪ್ರಭುತ್ವ ದೇಶವೊಂದು ತನ್ನ ಜನರನ್ನು ನಡೆಸಿಕೊಳ್ಳುವ ರೀತಿಯೇ? ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಸಲ್ಮಾನ್ ಅನೀಸ್ (Salman Anees)ಸೋಝ್ ಟ್ವೀಟ್ ಮಾಡಿದ್ದಾರೆ. ತಾವು ಮಾಡುತ್ತಿರುವುದು ಉತ್ತಮವೇ ಎಂದು ನ್ಯಾಯಾಲಯಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ವರದಿ ಪ್ರಕಟಿಸಿದ ‘ಆರ್ಸೆನಲ್ ಕನ್ಸಲ್ಟಿಂಗ್’ಗೆ ಕ್ರೈಸ್ತರ ಸಂಘಟನೆ ಜೆಸ್ಯುಟ್ ಆಫ್ ಇಂಡಿಯಾ ಕೃತಜ್ಞತೆ ಸಲ್ಲಿಸಿದೆ. ‘‘ಬಡವರ ಹಕ್ಕುಗಳಿಗಾಗಿ ಹೋರಾಡಿ ವಿವಿಧ ಕಾರಾಗೃಹಗಳಲ್ಲಿ ಕೊಳೆಯುತ್ತಿರುವ ಮುಖ್ಯವಾಗಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿರುವವರಿಗೆ ಜೆಸ್ಯುಟ್ ಆಫ್ ಇಂಡಿಯಾ ನಿರಂತರ ಬೆಂಬಲ ನೀಡುತ್ತದೆ. ಬಡವರು ಹಾಗೂ ಅಂಚಿಗೆ ತಳ್ಳಲ್ಪಟ್ಟವರಿಗೆ ಸಂಸ್ಥೆ ಬದ್ಧತೆಯನ್ನು ಪುನರುಚ್ಛರಿಸುತ್ತದೆ. ಅವರ ಘನತೆ ಹಾಗೂ ಸ್ವಾತಂತ್ರಕ್ಕಾಗಿ ಅವರೊಂದಿಗಿರುತ್ತದೆ’’ ಎಂದು ಜೆಸ್ಯುಟ್ ಆಫ್ ಇಂಡಿಯಾದ ಹೇಳಿಕೆ ತಿಳಿಸಿದೆ.
ಸ್ವಾಮಿ ಅವರು ಸಾಂಸ್ಥಿಕ ಹತ್ಯೆಯ ಬಲಿಪಶು ಎಂಬುದನ್ನು ಯಾರೊಬ್ಬರೂ ಮರೆಯಬಾರದು ಎಂದು ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಹೇಳಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಈ ಹ್ಯಾಕಿಂಗ್ ವರದಿಯ ಕಳಂಕದಿಂದ ಹೊರ ಬರುತ್ತದೆಯೇ? ನ್ಯಾಯಾಲಯಗಳು ಈ ವಿಧಿವಿಜ್ಞಾನದ ವರದಿಯನ್ನು ಗಮನಿಸುತ್ತದೆಯೇ ? ಅಥವಾ ಈ ಪ್ರಶ್ನೆಗಳನ್ನು ಕೇಳುವ ವ್ಯಕ್ತಿ ರಾಷ್ಟ್ರ ವಿರೋಧಿ ಎಂಬ ಹಣೆಪಟ್ಟಿ ಹೊಂದುವ ಅಪಾಯವಿದೆಯೇ ಎಂದು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಪ್ರಶ್ನಿಸಿದ್ದಾರೆ.
ಇತಿಹಾಸಕಾರ ಆಡ್ರೆ ಟ್ರಸ್ಚ್‌ಕೆ ಟ್ವೀಟ್ ಮಾಡಿ, ‘‘ದೀನ ದಲಿತರಿಗಾಗಿ ಹೋರಾಡಿದ ವಯಸ್ಸಾದ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಪಾದ್ರಿಯ ವಿರುದ್ಧ ದೋಷಾರೋಪಣೆ ರೂಪಿಸಲು ಅವರ ಕಂಪ್ಯೂಟರ್‌ನಲ್ಲಿ ಭಾರತ ಸರಕಾರ ಸಾಕ್ಷಗಳನ್ನು ಅಳವಡಿಸಿದೆ. ನಕಲಿ ಸಾಕ್ಷ್ಯಗಳ ಮೇಲೆ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ. ಅವರು ಭಾರತದ ಕಾರಾಗೃಹದಲ್ಲಿ ಸಾವನ್ನಪ್ಪುವ ವರೆಗೆ ವೈದ್ಯಕೀಯ ಸೇವೆ ನಿರಾಕರಿಸಲಾಗಿದೆ’’ ಎಂದಿದ್ದಾರೆ. ಕಾಂಗ್ರೆಸ್ ನಾಯಕ ದಿನೇಶ್ ಗುಂಡೂ ರಾವ್ ಅವರು, ಈಗ ಬಹಿರಂಗ ಗೊಂಡ ವಿಚಾರಗಳು ಆತಂಕಕಾರಿ ಹಾಗೂ ಭಯಾನಕ ಎಂದು ಬಣ್ಣಿಸಿದ್ದಾರೆ.
‘‘ಈ ರೀತಿಯಾಗಿ ದೋಷಾರೋಪಣೆಗೆ ಸಂಬಂಧಿಸಿ ಸಾಕ್ಷ್ಯಗಳನ್ನು ಅವರ ಕಂಪ್ಯೂಟರ್‌ನಲ್ಲಿ ಅಳವಡಿಸಿದ್ದರೆ, ಸರಕಾರ ಎಲ್ಲ ರೀತಿಯ ಆರೋಪಗಳಲ್ಲಿ ಹಲವರನ್ನು ಜೈಲಿಗೆ ಕಳುಹಿಸಬೇಕು’’ ಎಂದು ಅವರು ಟ್ವೀಟ್ ಮಾಡಿದ್ದಾರೆ. ‘‘ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸ್ಟಾನ್ ಸ್ವಾಮಿ ಅವರು ಕಾರಾಗೃಹದಲ್ಲಿ ಮೃತಪಟ್ಟರು. ಇತರರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ನ್ಯಾಯಾಲಯ ಕ್ರಮ ಕೈಗೊಳ್ಳಬೇಕು’’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.