×
Ad

ಕೋಬಾಡ್ ಗಾಂಧಿ ಪುಸ್ತಕ ಕುರಿತು ವಿವಾದ: ಮಹಾರಾಷ್ಟ್ರ ಸಾಹಿತ್ಯ ಮಂಡಳಿಗೆ ಮೂವರ ರಾಜೀನಾಮೆ

Update: 2022-12-14 22:15 IST

ಮುಂಬೈ,ಡಿ.14: ಮಾವೋವಾದಿ ಸಿದ್ಧಾಂತವಾದಿ ಎನ್ನಲಾಗಿರುವ ಕೋಬಾಡ್ ಗಾಂಧಿ(Kobad Gandhi)ಯವರ ನೆನಪುಗಳ ಕೃತಿಯ ಮರಾಠಿ ಅನುವಾದಕ್ಕೆ ನೀಡಲಾಗಿದ್ದ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳುವ ಮಹಾರಾಷ್ಟ್ರ ಸರಕಾರದ ನಿರ್ಧಾರದ ಕುರಿತು ಭುಗಿಲೆದ್ದಿರುವ ವಿವಾದದ ನಡುವೆಯೇ ಪ್ರಶಸ್ತಿ ಆಯ್ಕೆ ಸಮಿತಿಯ ಮೂವರು ಸದಸ್ಯರು ಮಹಾರಾಷ್ಟ್ರ ಸಾಹಿತ್ಯ ಮತ್ತು ಸಂಸ್ಕೃತಿ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಸರಕಾರದ ನಿರ್ಧಾರವು ಪ್ರಜಾಸತ್ತಾತ್ಮಕ ಕಾರ್ಯವಿಧಾನಗಳಿಗೆ ಅವಮಾನವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಾಹಿತಿಗಳಾದ ಡಾ.ಪ್ರಜ್ಞಾ ದಯಾ ಪವಾರ್,ನೀರಜಾ ಮತ್ತು ಹೇರಂಬ ಕುಲಕರ್ಣಿ ಅವರನ್ನೊಳಗೊಂಡ ಸಮಿತಿಯು ಗಾಂಧಿಯವರ ‘ಫ್ರಾಕ್ಚರ್ಡ್ ಫ್ರೀಡಂ:ಎ ಪ್ರಿಸನ್ ಮೆಮೊಯಿರ್ ’(Fractured Freedom: A Prison Memoir) ಕೃತಿಯ ಮರಾಠಿ ಅನುವಾದವನ್ನು 2021ನೇ ಸಾಲಿನ ದಿ.ಯಶವಂತರಾವ್ ಚವಾಣ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಪ್ರಶಸ್ತಿಯು ಒಂದು ಲ.ರೂ.ಗಳ ನಗದು ಪುರಸ್ಕಾರವನ್ನು ಒಳಗೊಂಡಿದೆ.

ಆದರೆ ಸರಕಾರವು ಪ್ರಶಸ್ತಿಯನ್ನು ಹಿಂದೆಗೆದುಕೊಂಡಿದ್ದು ಮಾತ್ರವಲ್ಲ,ಆಯ್ಕೆ ಸಮಿತಿಯನ್ನೂ ರದ್ದುಗೊಳಿಸಿದೆ.

ಡಿ.6ರಂದು ಸರಕಾರದ ಮರಾಠಿ ಭಾಷಾ ಇಲಾಖೆಯು ಗಾಂಧಿಯವರ ಕೃತಿಯ ಅನುವಾದಕ್ಕಾಗಿ ಅನಘಾ ಲೇಲೆ(Anagha Lele) ಅವರಿಗೆ ಪ್ರಶಸ್ತಿಯನ್ನು ಪ್ರಕಟಿಸಿತ್ತು. ಆದರೆ ಗಾಂಧಿಯವರು ಹೊಂದಿದ್ದಾರೆನ್ನಲಾಗಿರುವ ಮಾವೋವಾದಿ ಸಂಪರ್ಕಗಳಿಂದಾಗಿ ಪ್ರಶಸ್ತಿ ನೀಡಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳಿಗೆ ಗುರಿಯಾಗಿತ್ತು.

‘ಆಯ್ಕೆ ಸಮಿತಿಯನ್ನು ರದ್ದುಗೊಳಿಸುವ ಮಹಾರಾಷ್ಟ್ರ ಸರಕಾರದ ಏಕಪಕ್ಷೀಯ ನಿರ್ಧಾರವು ಪ್ರಜಾಸತ್ತಾತ್ಮಕ ಕಾರ್ಯವಿಧಾನಗಳನ್ನು ಅವಮಾನಿಸಿದೆ. ಮಹಾರಾಷ್ಟ್ರ ಸಾಹಿತ್ಯ ಮತ್ತು ಸಂಸ್ಕೃತಿ ಮಂಡಳಿಗೆ ರಾಜೀನಾಮೆ ನೀಡಲು ನಾನು ನಿರ್ಧರಿಸಿದ್ದೇನೆ ’ಎಂದು ಡಾ.ಪವಾರ್ ಹೇಳಿಕೆಯಲ್ಲಿ ತಿಳಿಸಿದ್ದರೆ,‘ಗಾಂಧಿಯವರ ಕೃತಿಯ ಮೇಲೆ ನಿಷೇಧವನ್ನು ಸಹ ಹೇರಲಾಗಿಲ್ಲ,ಆದರೂ ಅದರ ಅನುವಾದಕ್ಕೆ ಪ್ರಶಸ್ತಿಯನ್ನು ನೀಡುವ ತನ್ನ ನಿರ್ಧಾರದಿಂದ ಮಹಾರಾಷ್ಟ್ರ ಸರಕಾರವು ಹಿಂದೆ ಸರಿದಿದೆ. ಸರಕಾರದ ಇಂತಹ ನಡವಳಿಕೆಯು ಭವಿಷ್ಯದಲ್ಲಿ ಇಂತಹ ಪ್ರಕ್ರಿಯೆಗಳ ಭಾಗವಾಗಲು ಜನರನ್ನು ನಿರುತ್ತೇಜಿಸುತ್ತದೆ. ಮಂಡಳಿಯು ನಮ್ಮನ್ನು ಬೆಂಬಲಿಸದಿದ್ದರೆ,ಅದನ್ನು ತೊರೆಯುವುದೇ ಲೇಸು ’ಎಂದು ಕುಲಕರ್ಣಿ ಹೇಳಿದ್ದಾರೆ.

ಇದೇ ಭಾವನೆಯನ್ನು ಅಭಿವ್ಯಕ್ತಿಸಿರುವ ನೀರಜಾ,‘ನಾನು ಅಭಿವ್ಯಕ್ತಿ ಸ್ವಾತಂತ್ರದಲ್ಲಿ ನಂಬಿಕೆ ಹೊಂದಿದ್ದೇನೆ ಮತ್ತು ಸರಕಾರದ ನಿರ್ಧಾರದಿಂದ ನನಗೆ ತೀವ್ರ ನೋವುಂಟಾಗಿದೆ ’ಎಂದು ಹೇಳಿದ್ದಾರೆ.

‘ಆಡಳಿತಾತ್ಮಕ ಕಾರಣಗಳಿಂದ ’ಆಯ್ಕೆ ಸಮಿತಿಯ ನಿರ್ಧಾರವನ್ನು ಮತ್ತು ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಲಾಗಿದೆ. ಸಮಿತಿಯನ್ನೂ ರದ್ದುಗೊಳಿಸಲಾಗಿದೆ ಎಂದು ಸೋಮವಾರ ಸರಕಾರವು ಹೊರಡಿಸಿದ್ದ ಆದೇಶದಲ್ಲಿ ಹೇಳಲಾಗಿತ್ತು.

Similar News