ಉ.ಪ್ರದೇಶದ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಬಂಧಿಸಿದ ಈ.ಡಿ.
ಹೊಸದಿಲ್ಲಿ,ಡಿ.14: ಜಾರಿ ನಿರ್ದೇಶನಾಲಯ (ಈ.ಡಿ.)ವು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಪರಿವರ್ತಿತ ರಾಜಕಾರಣಿ ಮುಖ್ತಾರ್ ಅನ್ಸಾರಿ(Mukhtar Ansari)ಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಉತ್ತರ ಪ್ರದೇಶದ ಪ್ರಯಾಗರಾಜ್(Prayagraj)ನ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಬಳಿಕ ಬಂಧಿಸಿದೆ.
ಉ.ಪ್ರದೇಶದ ಬಂಡಾ ಜೈಲಿನಲ್ಲಿದ್ದ ಐದು ಬಾರಿಯ ಶಾಸಕ ಅನ್ಸಾರಿ (59)ಯನ್ನು ಈ.ಡಿ.ಕಳೆದ ವರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಪಡಿಸಿತ್ತು. ನವಂಬರ್‌ನಲ್ಲಿ ಪ್ರಯಾಗರಾಜ್‌ನ ತನ್ನ ಉಪವಲಯ ಕಚೇರಿಯಲ್ಲಿ ಅನ್ಸಾರಿಯ ಶಾಸಕ ಪುತ್ರ ಅಬ್ಬಾಸ್ ಅನ್ಸಾರಿ(Abbas Ansari)ಯ ವಿಚಾರಣೆ ನಡೆಸಿದ್ದ ಈ.ಡಿ.ಅವರನ್ನೂ ಬಂಧಿಸಿತ್ತು. ಬಳಿಕ ಅನ್ಸಾರಿಯ ಸಂಬಂಧಿ ಆತಿಫ್ ರಝಾರ(Atif Razzara)ನ್ನೂ ಅದು ಬಂಧಿಸಿತ್ತು.
ಅನ್ಸಾರಿ ವಿರುದ್ಧ ಉ.ಪ್ರದೇಶದಲ್ಲಿ ದಾಖಲಾಗಿರುವ ಹಲವಾರು ಎಫ್‌ಐಆರ್‌ಗಳು ಹಾಗೂ ಅವರ ಪತ್ನಿ ಮತ್ತು ರಝಾ ಸೇರಿದಂತೆ ಇಬ್ಬರು ಸಂಬಂಧಿಗಳು ಪಾಲುದಾರಿಕೆಯಲ್ಲಿ ನಡೆಸುತ್ತಿರುವ ವಿಕಾಸ ಕನ್‌ಸ್ಟ್ರಕ್ಷನ್ಸ್ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳ ಆಧಾರದಲ್ಲಿ ಈ.ಡಿ.ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಕೊಂಡಿದೆ.
ಭೂ ಕಬಳಿಕೆ,ಕೊಲೆ ಮತ್ತು ಹಫ್ತಾ ವಸೂಲಿ ಸೇರಿದಂತೆ ತನ್ನ ವಿರುದ್ಧ ದಾಖಲಾಗಿರುವ ಕನಿಷ್ಠ 49 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನ್ಸಾರಿ ಈ.ಡಿ.ನಿಗಾದಲ್ಲಿದ್ದಾರೆ. ಕೊಲೆ ಯತ್ನ ಮತ್ತು ಕೊಲೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ.