ಮುಂದಿನ ಬಾರಿ ಗಂಭೀರವಾಗಿ ಸಂಶೋಧನೆ ಮಾಡಿ: ವಿವೇಕ್‌ ಅಗ್ನಿಹೋತ್ರಿ, ಅನುರಾಗ್‌ ಕಶ್ಯಪ್‌ ನಡುವೆ ಟ್ವೀಟ್‌ ವಾರ್‌

Update: 2022-12-15 08:05 GMT

ಮುಂಬೈ: ಚಿತ್ರ ತಯಾರಕ ಅನುರಾಗ್‌ ಕಶ್ಯಪ್‌ (Anurag Kashyap) ಅವರು ಇತ್ತೀಚಿನ ಚಲನಚಿತ್ರಗಳ ಬಗ್ಗೆ ನೀಡಿದ್ದರೆನ್ನಲಾದ ಹೇಳಿಕೆಗೆ ಆಕ್ಷೇಪಿಸಿ ʻThe Kashmir Filesʼ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ (Vivek Agnihotri) ನೀಡಿದ ಹೇಳಿಕೆಯೊಂದು ಬುಧವಾರ ಇಬ್ಬರೂ ಚಿತ್ರ ತಯಾರಕರ ನಡುವೆ ಟ್ವೀಟ್‌ ವಾರ್‌ಗೆ ಕಾರಣವಾಯಿತು.

"ಕಾಂತಾರ ಮತ್ತು ಪುಷ್ಪಾ ಇವುಗಳಂತಹ ಚಲನಚಿತ್ರಗಳು ಚಿತ್ರೋದ್ಯಮವನ್ನು ನಾಶಗೊಳಿಸುತ್ತವೆ: ಅನುರಾಗ್‌ ಕಶ್ಯಪ್" ಎಂದು ಅನುರಾಗ್‌ ಕಶ್ಯಪ್‌ ಅವರು ಹೇಳಿದ್ದಾರೆನ್ನಲಾದ  ಸಂದರ್ಶನದ ಸ್ಕ್ರೀನ್‌ ಶಾಟ್‌ ಒಂದನ್ನು ಅಗ್ನಿಹೋತ್ರಿ ಶೇರ್‌ ಮಾಡಿದ್ದರಲ್ಲದೆ "ನಾನು ಬಾಲಿವುಡ್‌ನ ಏಕೈಕ ಮೈಲಾರ್ಡ್‌ನೊಂದಿಗೆ ಈ ಕುರಿತು ಸಂಪೂರ್ಣವಾಗಿ ಒಪ್ಪುವುದಿಲ್ಲ," ಎಂದು‌ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕಶ್ಯಪ್‌ "ಸರ್‌, ಇದು ನಿಮ್ಮ ತಪ್ಪಲ್ಲ. ನನ್ನ ಸಂದರ್ಶನಗಳ ಕುರಿತ ನಿಮ್ಮ ಟ್ವೀಟ್‌ಗಳಂತೆಯೇ ನಿಮ್ಮ ಚಲನಚಿತ್ರಗಳ ಸಂಶೋಧನೆಯೂ ಆಗಿದೆ. ನಿಮ್ಮ ಮತ್ತು ನಿಮ್ಮ ಮಾಧ್ಯಮದ ಸ್ಥಿತಿಯೂ ಅದೇ ಆಗಿದೆ, ಮುಂದಿನ ಬಾರಿ ಸ್ವಲ್ಪ ಗಂಭೀರ ಸಂಶೋಧನೆ ಮಾಡಿ,"ಎಂದು ತಿರುಗೇಟು ನೀಡಿದ್ದಾರೆ.

ಇದಕ್ಕೆ ಉತ್ತರಿಸಿದ ಅಗ್ನಿಹೋತ್ರಿ, ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರಕ್ಕಾಗಿ ನಡೆಸಿದ ನಾಲ್ಕು ವರ್ಷದ ಸಂಶೋಧನೆ ಸುಳ್ಳು ಎಂದು ಸಾಬೀತು ಪಡಿಸಿ ಎಂದರಲ್ಲದೆ ಕಶ್ಯಪ್‌ ಅವರ ಇತ್ತೀಚೆಗೆ ಬಿಡುಗಡೆಗೊಂಡ ʼದೊಬಾರಾʼ ಚಿತ್ರವನ್ನು ಟಾರ್ಗೆಟ್‌ ಮಾಡಿದರು.

"ದಿ ಕಾಶ್ಮೀರ್‌ ಫೈಲ್ಸ್‌ ಎಲ್ಲಾ ಸುಳ್ಳು, ಗಿರಿಜಾ ಟಿಕೂ, ಬಿ ಕೆ ಗಂಜು, ನದಿಮಾರ್ಗ್ ಎಲ್ಲಾ ಸುಳ್ಳು, 700 ಪಂಡಿತರ ವೀಡಿಯೋಗಳೂ ಸುಳ್ಳು, ಹಿಂದುಗಳ್ಯಾರೂ ಸಾಯಲಿಲ್ಲ, ಇದನ್ನು ಸಾಬೀತುಪಡಿಸಿ ಮತ್ತು ನಾನು ದೊಬಾರಾ ಈ ತಪ್ಪು ಮಾಡದಂತೆ ನೋಡಿಕೊಳ್ಳಿ,ʼʼ ಎಂದು ಅಗ್ನಿಹೋತ್ರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Similar News